ಕಾಫಿ ಬೆಳೆ ಹಾನಿಗೆ ಪ್ರತೀ ಹೆಕ್ಟೇರ್ ಗೆ 1 ಲಕ್ಷ ರೂ. ಪರಿಹಾರ ನೀಡಬೇಕು: ಡಾ.ಅಶ್ವಥ್ ನಾರಾಯಣ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿಂತರವಾಗಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕಾಫಿ ಬೆಳೆಗಾರರು ನಷ್ಟ ಅನುಭವಿಸಿದ್ದು, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 1ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆದಿದ್ದ ಬೆಳೆಗಾರರಿಗೆ 50 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಪ್ರತೀ ಹೆಕ್ಟೇರ್ ಗೆ 1ಲಕ್ಷ ರೂ. ನೀಡುವಂತೆ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಶುಕ್ರವಾರ ಚಿಕ್ಕಮಗಳೂರು ತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ ಮನೆ ಕಳೆದುಕೊಂಡು ಸಂತ್ರಸ್ಥರಾಗಿರುವ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು. ಮಳೆಯಿಂದ ಸಾಕಷ್ಟು ಮನೆಗಳು ಬಿದ್ದು ಹೋಗಿದ್ದು ಮನೆ ನಿರ್ಮಾಣ ಮಾಡಿಕೊಳ್ಳಲು ಕನಿಷ್ಠ ಪಕ್ಷ 5 ಲಕ್ಷ ರೂ. ನೀಡಬೇಕು. ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಮಳೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ ತಾತ್ಕಾಲಿಕವಾಗಿ ಸರಿಪಡಿಸಿಕೊಳ್ಳಲು ತಕ್ಷಣವೇ ಅವರಿಗೆ 10ಸಾವಿರ ರೂ. ನೀಡಬೇಕು ಎಂದ ಅವರು, ಕಾಫಿ ಬೆಳೆ ಸೇರಿದಂತೆ ವಿವಿಧ ಬೆಳೆಗಳು ದಾಖಲಾತಿಯಲ್ಲಿ ಬೆಳೆ ಕಾಲಂ ದಾಖಲಾಗಿಲ್ಲ. ಇದರಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಲೋಪವನ್ನು ಸರಿಪಡಿಸಿ ರೈತರು ಮತ್ತು ಬೆಳೆಗಾರರ ಪರವಾಗಿ ಸೂಕ್ತ ಕ್ರಮವಹಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಗಾಳಿ, ಮಳೆಗೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇಲ್ಲದಂತಾಗಿದೆ. ಲೈನ್‍ಮ್ಯಾನ್‍ಗಳು ಇಲ್ಲದಂತಾಗಿದೆ. ಈ ಹಿಂದೆ ಸಂಭವಿಸಿದ ಅತಿವೃಷ್ಟಿ ಸಂದರ್ಭದಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಐದು ದಿನಗಳ ಒಳಗೆ ಸರಿಪಡಿಸಿ ವಿದ್ಯುತ್ ನೀಡುವ ಕೆಲಸ ಮಾಡಲಾಗಿತ್ತು. 15 ದಿನ ಕಳೆದರೂ ವಿದ್ಯುತ್ ಸಮಸ್ಯೆ ಸರಿಪಡಿಸಿಲ್ಲ. ತಕ್ಷಣ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಮೂಡಿಗೆರೆ ತಾಲೂಕಿನಲ್ಲಿ ಜಮೀನಿನಲ್ಲಿ ಜಾನುವಾರುಗಳನ್ನು ಕಟ್ಟಲು ತೆರಳಿದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದ ಅವರು ಅತೀವೃಷ್ಟಿ ಸಂಭವಿಸಿದಾಗ ಆಗುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರು ಹೇಳಿಕೊಂಡು ಓಡಾಡುತ್ತಿದೆ ಹೊರತು. ಸರ್ಕಾರ ಬದುಕಿದೆ ಎನ್ನುವುದು ಕಾಣುತ್ತಿಲ್ಲ. ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಸೂಕ್ತ ನಿರ್ಧಾರಗಳನ್ನು ತಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಬಳಿಕ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಅತಿವೃಷ್ಟಿ ಸಂಬಂಧ ಚರ್ಚಿಸಿದರು.