ತರೀಕೆರೆ: ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಸಕಾಲಿಕ ಚಿಕಿತ್ಸೆ ಒದಗಿಸಿದ ವೈದ್ಯ
ಚಿಕ್ಕಮಗಳೂರು, ಜೂ.27: ತರೀಕರೆ ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನರಳಾಡುತ್ತಿದ್ದ ತುಂಬು ಗರ್ಭಿಣಿಯೊಬ್ಬಳನ್ನು ತರೀಕೆರೆ ತಾಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಹೆರಿಗೆ ಮಾಡಿಸಿದ ಘಟನೆ ವರದಿಯಾಗಿದೆ.
ಅಜ್ಜಂಪುರ ತಾಲೂಕಿನ ಗಡಿರಂಗಾಪುರದ ತುಂಬು ಗರ್ಭಿಣಿ ಬಿ ನೆಗಟಿವ್ ರಕ್ತ ಹೊಂದಿಸಲು ಕಷ್ಟವಾದ ಹಿನ್ನೆಲೆಯಲ್ಲಿ ಹೆರಿಗೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಲು ಹೊರಟಿದ್ದರು. ಇದಕ್ಕಾಗಿ ತರೀಕೆರೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಕೆ ತರೀಕೆರೆ ಸರಕಾರಿ ಆಸ್ಪತ್ರೆಯಲ್ಲಿ ಮುಂಭಾಗದಲ್ಲಿ ನರಳಾಡುತ್ತಿದ್ದಳು. ಇದನ್ನು ಗಮನಿಸಿದ ಡಾ.ದೇವರಾಜ್ ಆಕೆಯನ್ನು ತರೀಕೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಿ ನೆಗಟಿವ್ ರಕ್ತದ ವ್ಯವಸ್ಥೆ ಕಲ್ಪಿಸಿದ್ದಲ್ಲದೆ ಹೆರಿಗೆ ಕೂಡಾ ಮಾಡಿಸಿದ್ದಾರೆ.
ಗರ್ಭಿಣಿಗೆ ಸುಸೂತ್ರ ಹೆರಿಗೆಯಾಗಿದ್ದು, ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ 30 ಸಾವಿರ ರೂ. ವೆಚ್ಚವಾಗುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಇದೀಗ ತರೀಕೆರೆ ತಾಲೂಕು ವೈದ್ಯಾಧಿಕಾರಿ ಡಾ.ದೇವರಾಜ್ ಅವರು ಆಕೆಗೆ ಸರಕಾರಿ ವೆಚ್ಚದಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆಯ ಸಂಕಷ್ಟಕ್ಕೆ ಸಕಾಲಿಕವಾಗಿ ಸ್ಪಂದಿಸಿ ಹೆರಿಗೆ ಡಾ.ದೇವರಾಜ್ ಅವರ ಸಾಮಾಜಿಕ ಕಾಳಜಿಗೆ ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.