ಚಿಕ್ಕಮಗಳೂರು | ಟಿಟಿ ವಾಹನ-ಕಾರಿನ ನಡುವೆ ಮುಖಾಮುಖಿ ಢಿಕ್ಕಿ; ಓರ್ವ ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಕಾರು ಹಾಗೂ ಟಿಟಿ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾರಿನಲ್ಲಿದ್ದ ತಮಿಳುನಾಡು ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಶಿಡ್ಲೆ ಗ್ರಾಮದಲ್ಲಿ ಶನಿವಾರ ವರದಿಯಾಗಿದ್ದು, ಕಾರಿನಲ್ಲಿದ್ದ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ತಮಿಳುನಾಡು ರಾಜ್ಯದ ಧರ್ಮಪುರಿ ನಿವಾಸಿಗಳಾದ ಒಂದೇ ಕುಟುಂಬದ ಯಾತ್ರರ್ಥಿಗಳು ಶೃಂಗೇರಿ ದೇವಾಲಯಕ್ಕೆ ಬಂದಿದ್ದು, ದೇವಾಲಯ ಭೇಟಿ ಬಳಿಕ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿಯಲ್ಲಿರುವ ಶಿಡ್ಲೆ ಎಂಬ ಗ್ರಾಮದಲ್ಲಿ ಬೆಂಗಳೂರಿನಿಂದ ಶೃಂಗೇರಿ ಕಡೆ ಬರುತ್ತಿದ್ದ ಟಿಟಿ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರಿನಲ್ಲಿದ್ದ ಭುವನಾ(60) ಎಂಬವರು ಸ್ಥಳದಲ್ಲೆ ಮೃತಪಟ್ಟಿದ್ದರೇ, ಮಹಿಳೆಯ ಮತ್ತಿಬ್ಬರು ಸಂಬಂಧಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತದಲ್ಲಿ ಕಾರು ಹಾಗೂ ಟಿಟಿ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಟಿಟಿ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.