ನಕ್ಸಲರ ಶರಣಾಗತಿ ತಂತ್ರಗಾರಿಕೆಯೇ ಅಥವಾ ಸಿದ್ಧಾಂತ ತೊರೆದಿದ್ದಾರೆಯೇ ಎಂಬುದನ್ನು ತನಿಖೆ ನಡೆಸಿ ಸರಕಾರ ಪ್ಯಾಕೇಜ್ ನೀಡಲಿ: ಸಿ.ಟಿ.ರವಿ
ಸಿ.ಟಿ.ರವಿ
ಚಿಕ್ಕಮಗಳೂರು: ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರ ಬಂದು ಶರಣಾಗಿದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯ ಸರಕಾರ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿರುವ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ಶರಣಾಗತಿ ಹೆಸರಿನಲ್ಲಿ ಕಾರ್ಯಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿದಂತೆ ಆಗಬಾರದು. ಅವರ ಚಲನವಲನಗಳ ಮೇಲೆ ನಿಗಾ ಇಡುವುದರ ಜತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.
ನಕ್ಸಲರು ಬಳಕೆ ಶಸಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿ, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದರು, ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು. ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದೆ... ಎಲ್ಲಾ ಮಾಹಿತಿ ಹಂಚಿಕೊಂಡರೇ ಶರಣಾಗತಿಗೆ ಅರ್ಥ ಬರುತ್ತದೆ ಎಂದು ಸಿ.ಟಿ.ರವಿ ಹೇಳಿದರು.
ನಕ್ಸಲ್ ಸಿದ್ಧಾಂತ ಸಂವಿಧಾನಕ್ಕೆ ವಿರುದ್ಧವಾದದ್ದು. ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲದ ಸಿದ್ಧಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ ಎಂದರು.
ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನಲೆ ಪ್ಯಾಕೇಜ್ ನೀಡುವ ಮುನ್ನ ಎಲ್ಲಾ ಮಾಹಿತಿ ಕಲೆ ಹಾಕಬೇಕು. ನಕ್ಸಲ್ ಶರಣಾಗತಿ ಒಂದು ತಂತ್ರಗಾರಿಕೆ ಆಗಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.