ಮಂಡ್ಯದಲ್ಲಿ ಬಿಜೆಪಿ ಪಾದಯಾತ್ರೆ ವೇಳೆ ವಿದ್ಯಾರ್ಥಿನಿಯಲದ ಮೇಲೆ ದಾಳಿ: ಆರೋಪಿಗಳ ಬಂಧನಕ್ಕೆ ರಾಜ್ಯ ಕುರುಬ ಸಂಘ ಆಗ್ರಹ
ಚಿಕ್ಕಮಗಳೂರು: ಕೆರಗೋಡು ಹನುಮಧ್ವಜ ವಿವಾದ ಘಟನೆ ಸಂಬಂಧ ಬಿಜೆಪಿ ಸಂಘಪರಿವಾರದವರು ನಡೆಸಿದ ಪಾದಯಾತ್ರೆ ವೇಳೆ ಕಿಡಿಗೇಡಿಗಳು ಕುರುಬ ಸಂಘದ ವಿದ್ಯಾರ್ಥಿನಿಲಯದ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿ ಭಾರೀ ಹಾನಿಯನ್ನುಂಟು ಮಾಡಲಾಗಿದೆ. ರಾಜ್ಯ ಸರಕಾರ ವಿದ್ಯಾರ್ಥಿನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ ಸಂಘಪರಿವಾರದ ಮುಖಂಡರನ್ನು ಕೂಡಲೇ ಬಂಧಿಸಬೇಕು. ತಪ್ಪಿದಲ್ಲಿ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಕುರುಬ ಸಂಘದ ಸಹ ಕಾರ್ಯದರ್ಶಿ ಡಿ.ಸಿ.ಪುಟ್ಟೇಗೌಡ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ರಂಗಮಂದಿರದಲ್ಲಿ ಗೌರಿ ಶಂಕರ ಸೇವಾ ಟ್ರಸ್ಟ್ ಗೆ ನಾಡಧ್ವಜ ಹಾಗೂ ರಾಷ್ಟ್ರಧ್ವಜ ಹಾರಿಸಲು ಷರತ್ತಿನೊಂದಿಗೆ ಜಿಲ್ಲಾಡಳಿತ ಧ್ವಜಸ್ಥಂಭ ನಿರ್ಮಾಣಕ್ಕೆ ಅನುಮತಿ ನೀಡಿದೆ. ಆದರೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ಥಳೀಯ ಜನರಿಗೆ ತಪ್ಪು ಮಾಹಿತಿ ನೀಡಿ ಇತ್ತೀಚೆಗೆ ಧ್ವಜ ಸ್ಥಂಭದಿಂದ ರಾಷ್ಟ್ರಧ್ವಜ ಕೆಳಗಿಳಿಸಿ ಹನುಮಧ್ವಜ ಹಾರಿಸಿ ಕಾನೂನು ಉಲ್ಲಂಘನೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಿದ್ದಾರೆ. ಈ ಘಟನೆ ಸಂಬಂಧ ಬಿಜೆಪಿಯವರು ನಡೆಸಿದ ಪಾದಯಾತ್ರೆ ವೇಳೆ ಸಂಘಪರಿವಾರದ ಕಿಡಿಗೇಡಿಗಳು ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯದೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಲ್ಲು ಎಸೆದು ಭಾರೀ ಹಾನಿಯನ್ನುಂಟು ಮಾಡಿದ್ದಾರೆ. ವಿದ್ಯಾರ್ಥಿನಿಲಯದೊಳಗಿದ್ದ ಕನಕದಾಸ, ಸಂಗೊಳ್ಳಿರಾಯಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೇ ಮಂಡ್ಯ ಜಿಲ್ಲೆಯ ಕುರುಬರ ಸಂಘದ ನಿರ್ದೇಶಕ ಸಾತನೂರು ಮಹೇಶ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಹಾಗೂ ಸಂಘಪರಿವಾರದವರಿಗೆ ಹನುಮಧ್ವಜ ಹಾಗೂ ಧರ್ಮದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಧ್ವೇಷ ರಾಜಕಾರಣದ ಭಾಗವಾಗಿ ಈ ಕೃತ್ಯ ಎಸಗಲಾಗಿದೆ. ಭಕ್ತ ಕನಕದಾಸ, ಸಂಗೊಳ್ಳಿರಾಯಣ್ಣ, ಸಿದ್ದರಾಮಯ್ಯ ಅವರ ಭಾವಚಿತ್ರಗಳಿಗೆ ಹಾನಿ ಮಾಡಿರುವ ಕೃತ್ಯದಿಂದಾಗಿ ಇಡೀ ಕುರುಬ ಸಮುದಾಯದ ಜನರಿಗೆ ಅವಮಾನ ಮಾಡಲಾಗಿದೆ. ಘಟನೆ ವೇಳೆ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ.ರವಿಯಾಗಲೀ ಇತರ ಬಿಜೆಪಿ ಮುಖಂಡರಾಗಲೀ ತಮ್ಮ ಕಾರ್ಯಕರ್ತರ ಕಿಡಿಗೇಡಿತನ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ಅವರ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದಾರೆ. ಕುರುಬ ಸಮುದಾಯದ ವಿದ್ಯಾರ್ಥಿನಿಲಯದಲ್ಲಿದ್ದ ವಿದ್ಯಾರ್ಥಿಗಳೂ ಕೂಡ ಹಿಂದೂಗಳೇ ಆಗಿದ್ದು, ಹಿಂದುಗಳ ಮೇಲೆ ಹಿಂದುಗಳೇ ದೌರ್ಜನ್ಯ ಎಸಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಅವರು ಕಿಡಿಕಾರಿದರು.
ಬಿಜೆಪಿ, ಸಂಘಪರಿವಾರದವರು ಶ್ರೀರಾಮ, ಹನುಮಧ್ವಜದ ನೆಪ ಮುಂದಿಟ್ಟುಕೊಂಡು ವಿನಾಕಾರಣ ವಿವಾದ, ಕೋಮುಗಲಭೆ ಸೃಷ್ಟಿಸಲು ಸಂಚು ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭ ಒಂದು ಧರ್ಮದವರ ಓಟಿಗಾಗಿ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿದ್ದಾರೆ. ಹನುಮಧ್ವಜಕ್ಕೆ ನೀಡುವ ಗೌರವವನ್ನು ಬಿಜೆಪಿಯವರು ಸಂವಿಧಾನ, ರಾಷ್ಟ್ರಧ್ವಜಕ್ಕೆ ನೀಡದೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದ ದೂರಿದರು.
ಸುದ್ದಿಗೋಷ್ಠಿಯಲ್ಲಿ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ಕರಿಬಡ್ಡೆ ಶ್ರೀನಿವಾಸ್, ಲೋಕೇಶಪ್ಪ ಹಾಗೂ ಮುಖಂಡರಾದ ಮೂರ್ತಿ, ಅಡವೇಗೌಡ, ರಮೇಶ್ ಉದ್ದೇಬೋರನಹಳ್ಳಿ, ಪುನೀತ್, ಜಗದೀಶ್ ಉಪಸ್ಥಿತರಿದ್ದರು.