ಬಾಳೆಹೊನ್ನೂರು: ಆಸ್ಪತ್ರೆಯಿಂದ ಪರಾರಿಯಾಗಿದ್ದ ರೌಡಿಶೀಟರ್ ಬಂಧನ
ಆರೋಪಿ ಪೂರ್ಣೇಶ್
ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಪೊಲೀಸರ ಕಣ್ತಪ್ಪಿಸಿಕೊಂಡು ಪರಾರಿಯಾಗಿದ್ದ ರೌಡಿಶೀಟರ್ ಪೂರ್ಣೇಶ್ನನ್ನು ಬಾಳೆಹೊನ್ನೂರು ಪೊಲೀಸರು ಮತ್ತೆ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸ್ವಗ್ರಾಮ ಮಾಗಲು ಗ್ರಾಮದ ಸೇತುವೆಯೊಂದರ ಬಳಿ ಅಡಗಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಕೊಲೆ ಯತ್ನ, ಬೆದರಿಕೆ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಸುಮಾರು 9 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಾಗಲು ಗ್ರಾಮದ ಪೂರ್ಣೇಶ್ ಹಲವಾರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ತನ್ನ ಸ್ವಗ್ರಾಮ ಮಾಗಲು ಸಮೀಪದ ಕಾಡಿನಲ್ಲಿ ಮರಗಳ ಮೇಲೆ ದಿನ ಕಳೆಯುತ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಕಳೆದ ಒಂದು ತಿಂಗಳ ಹಿಂದೆ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನರೂ ಪೊಲೀಸರು ಮಾಗಲು ಗ್ರಾಮದಲ್ಲಿದ್ದ ಆತನ ಮನೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮನೆಯೊಳಗಿದ್ದ ಪೂರ್ಣೇಶ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು ಎಂದು ತಿಳಿದು ಬಂದಿದೆ.
ಗುಂಡೇಟಿನಿಂದ ಗಾಯಗೊಂಡಿದ್ದ ಪೂರ್ಣೇಶ್ನಿಗೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಭದ್ರತೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಬಳಿಕ ಕೊಂಚ ಸುಧಾರಿಸಿಕೊಂಡಿದ್ದ, ಪೂರ್ಣೇಶ್ ಇತ್ತೀಚೆಗೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ನಿದ್ರೆಗೆ ಜಾರಿದ್ದ ವೇಳೆ ಪೊಲೀಸ್ ಸಿಬ್ಬಂದಿಯ ಜೇಬಿನಲ್ಲಿದ್ದ ಕೈಕೋಳದ ಕೀ ಎಗರಿಸಿ ಕೋಳದಿಂದ ಬಿಡಿಸಿಕೊಂಡು ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದ ಎನ್ನಲಾಗಿದೆ.
ಹೀಗೆ ಪರಾರಿಯಾಗಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಕಾಲಿಗೆ ಗುಂಡೇಟು ಬಿದ್ದಿದ್ದ ಪರಿಣಾಮ ಹೆಚ್ಚು ಓಡಲಾಗದೇ ತನ್ನ ಸ್ವಗ್ರಾಮ ಮಾಗಲು ಸಮೀಪದಲ್ಲೇ ಆರೋಪಿ ಪೂರ್ಣೇಶ್ ಅಡಗಿಕೊಂಡಿದ್ದ ಎನ್ನಲಾಗಿದ್ದು, ಮಂಗಳವಾರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.