ಬಿಸಿಸಿಐ ಅಂಡರ್-23 ಮಹಿಳಾ ಟಿ-20 ಕ್ರಿಕೆಟ್ : ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ಚಿಕ್ಕಮಗಳೂರಿನ ಮಹಿಳಾ ಕ್ರಿಕೆಟರ್ ಶಿಶಿರಾ
ಚಿಕ್ಕಮಗಳೂರು : ದೇಶದ ಓಡಿಶಾ ರಾಜ್ಯದಲ್ಲಿ ನಡೆಯುವ ಬಿಸಿಸಿಐ 23ವರ್ಷದೊಳಗಿನ ಮಹಿಳಾ ಟಿ-20 ಕ್ರಿಕೆಟ್ 2024-25ರ ಸರಣಿಗೆ ಕರ್ನಾಟಕ ಮಹಿಳಾ ಕ್ರಿಕೆಟ್ ಆಟಗಾರರ ಹೆಸರನ್ನು ಬಿಡುಗಡೆ ಮಾಡಿದ್ದು, ತಂಡಕ್ಕೆ ಕಾಫಿನಾಡು ಮೂಲದ ಶಿಶಿರಾ ಎ.ಗೌಡ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸಿದ್ದಾರೆ.
ಅಂಡರ್-23 ಮಹಿಳಾ ಕ್ರಿಕೆಟ್‍ನಲ್ಲಿ ಆಡುವ ಕರ್ನಾಟಕ ತಂಡದ ನಾಯಕಿಯಾಗಿ ರೋಶಿನಿ ಕಿರಣ್ ಆಯ್ಕೆಯಾಗಿದ್ದು, ರೋಶಿನಿ ನಾಯಕತ್ವದ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯವರಾದ ಶಿಶಿರಾ ಎ.ಗೌಡ ಆಡಲಿದ್ದಾರೆ. ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಶಿಶಿರ ಎ.ಗೌಡ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಅಶ್ವಥ್‍ಬಾಬು ಹಾಗೂ ತ್ರಿವೇಣಿ ದಂಪತಿ ಪುತ್ರಿಯಾಗಿದ್ದಾರೆ.
ಸೆ.6, 2022ರಲ್ಲಿ ಜನಿಸಿರುವ ಶಿಶಿರ ಎ.ಗೌಡ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ಅಪಾರವಾದ ಆಸಕ್ತಿ ಹೊಂದಿದ್ದಳು. ಸರಕಾರಿ ಕರ್ತವ್ಯದಲ್ಲಿರುವ ಡಾ.ಅಶ್ವಥ್‍ಬಾಬು ಅವರು ಕರ್ತವ್ಯದ ಬಿಡುವಿನ ವೇಳೆ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವಾಗ ಬಾಲಕಿ ಯಾಗಿದ್ದ ಶಿಶಿರ ಎ.ಗೌಡ ಕ್ರಿಕೆಟ್ ಆಟವನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಿದ್ದಳು ಎಂದು ಶಿಶಿರಾ ತಂದೆ ಹಾಗೂ ಡಿಎಚ್‍ಒ ಡಾ.ಅಶ್ವಥ್‍ಬಾಬು ತಿಳಿಸಿದ್ದಾರೆ.
ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಸಿಕೊಂಡ ಶಿಶಿರ ಎ.ಗೌಡ. ಈ ಹಿಂದೆ ಅಂಡರ್ 16, ಅಂಡರ್ 19, ಸೀನಿಯರ್ ವುಮೆನ್ ಅಂಡರ್ 23 ಟಿ-20ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾಳೆ. ಇಂಡಿಯಾ ಮಹಿಳಾ ಟೀಮ್‍ನಲ್ಲಿ ಆಡುವ ಕನಸು ಕಾಣುತ್ತಿರುವ ಶಿಶಿರ ಎ.ಗೌಡ ಅವರು ಸದ್ಯ ಬಿಸಿಸಿಐ ಅಂಡರ್ 23 ಟಿ-20 ಅಂತರ್ ರಾಜ್ಯ ಕ್ರ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.
ಶಿಶಿರ ಎ.ಗೌಡ ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ಬೌಲರ್ ಆಗಿರುವುದು ವಿಶೇಷ. ಚಿಕ್ಕಮಗಳೂರು ಜಿಲ್ಲೆಯ ರಾಮದಾಸ ಅವರ ಬಳಿ ಕ್ರಿಕೆಟ್ ಅಭ್ಯಾಸ ನಡೆಸಿರುವ ಅವರು ಸದ್ಯ ಕೆಸಿಎಯಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಂಜಿನಿಯರಿಂಗ್ ಪದವಿ ಶಿಕ್ಷಣ ಪೂರ್ಣಗೊಳಿಸಿರುವ ಶಿಶಿರಾ, ಸದ್ಯ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂ.ಟೆಕ್. ವ್ಯಾಸಂಗ ಮಾಡುತ್ತಿದ್ದಾಳೆ.
ಇದುವರೆಗಿನ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿಶಿರ ಎ.ಗೌಡ ಬಿಸಿಸಿಐ ಅಂಡರ್ 23 ಟಿ-20 ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಕರ್ನಾಟಕ ತಂಡದಲ್ಲಿರುವ 15 ಮಹಿಳಾ ಕ್ರಿಕೆಟ್ ಪಟುಗಳಲ್ಲಿ ಶಿಶಿರಾ ಒಬ್ಬಳಾಗಿದ್ದು, ಜ.5ರಿಂದ ಓಡಿಶಾ ರಾಜ್ಯದಲ್ಲಿ ಪಂದ್ಯಾವಳಿ ನಡೆಯಲಿದೆ. ಶಿಶಿರ ಎ.ಗೌಡ ಅವರ ಈ ಸಾಧನೆಗೆ ಜಿಲ್ಲೆಯ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಜಿಲ್ಲೆಯ ಕಡೂರು ತಾಲೂಕಿನವರಾದ ವೇದ ಕೃಷ್ಣಮೂರ್ತಿ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಸದ್ಯ ಅವರು ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಕ್ರಿಕೆಟ್ ತಾರೆಯಾಗಿ ಮಿಂಚಿದ್ದು, ವೇದಾ ಕೃಷ್ಣಮೂರ್ತಿ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಶಿಶಿರಾ ಮಹಿಳಾ ಕ್ರಿಕೆಟ್‍ನಲ್ಲಿ ಸಾಧನೆ ಮಾಡುವ ತವಕದಲ್ಲಿದ್ದಾರೆ. ಶಿಶಿರಾ ಎ ಗೌಡ ಅಂತರ್ ರಾಜ್ಯ ಕ್ರಿಕೆಟ್‍ನಲ್ಲಿ ಸಾಧನೆ ಮಾಡಿ, ರಾಷ್ಟ್ರೀಯ ಮಹಿಳಾ ತಂಡಕ್ಕೂ ಆಯ್ಕೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ತಾರೆಯಾಗಿ ಮಿಂಚಲಿ ಎಂಬುದು ಕಾಫಿನಾಡಿನ ಕ್ರಿಕ್ರಿಟ್ ಪ್ರಿಯರ ಹಾರೈಕೆಯಾಗಿದೆ.