ಬ್ಯಾರಿ ಸಮುದಾಯದವರ ಭಾಷಾಭಿಮಾನದಿಂದ ಬ್ಯಾರಿ ಭಾಷೆ ಬೆಳೆಯುತ್ತಿದೆ: ಸ್ಪೀಕರ್ ಯು.ಟಿ.ಖಾದರ್
ಬ್ಯಾರಿ ಭಾಷೆ ದಿನಾಚರಣೆ
ಚಿಕ್ಕಮಗಳೂರು: ಕಾಫಿನಾಡು ಸರ್ವ ಧರ್ಮಿಯರ ಸೌಹಾರ್ದ, ಸಾಮರಸ್ಯದ ಬೀಡಾಗಿದೆ. ಜಿಲ್ಲೆಯಲ್ಲಿ ಬ್ಯಾರಿ ಸಮುದಾಯದ ಜನರ ಸಂಖ್ಯೆ ಕಡಿಮೆ ಇದ್ದರೂ ಇಲ್ಲಿನ ಜನತೆ ಬ್ಯಾರಿ ಸಮುದಾಯದವರನ್ನು ಹೊರಗಿನವರೆಂದು ಭಾವಿಸದೇ ತಮ್ಮವರನ್ನಾಗಿಸಿಕೊಂಡಿದ್ದು, ಇದಕ್ಕೆ ಇಲ್ಲಿನ ಜನರ ಹೃದಯ ವೈಶಾಲ್ಯತೆ ಕಾರಣ. ಬ್ಯಾರಿ ಸಮುದಾಯದ ಕಾರ್ಯಕ್ರಮಗಳು ಒಂದು ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ಸಮುದಾಯದವರ ಕಾರ್ಯಕ್ರಮ ಆಗಬೇಕು, ಬೇರೆ ಭಾಷಿಕರಿಗೂ ಬ್ಯಾರಿ ಭಾಷೆಯನ್ನು ಕಲಿಸುವ ಕಾರ್ಯಕ್ರಮ ಆಗಬೇಕು ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬ್ಯಾರಿಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಬ್ಯಾರಿ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಬ್ಯಾರಿ ಭಾಷೆ ನಿರ್ಧಿಷ್ಟ ಪ್ರದೇಶಕ್ಕೆ ಸೀಮಿತವಾಗಿತ್ತು, ಬ್ಯಾರಿ ಸಮುದಾಯದವರು ಜೀವನೋಪಾಯ, ವ್ಯಾಪರಕ್ಕಾಗಿ ಇಲ್ಲಿಗೆ ಬಂದ ಸಂದರ್ಭದಲ್ಲಿ ಸಮುದಾಯದ ಜನರನ್ನು ಇಲ್ಲಿನ ಜನರು ತಮ್ಮವರೆಂದೇ ಕಂಡಿದ್ದಾರೆ. ಬ್ಯಾರಿ ಸಮುದಾಯದ ಜನರೂ ಕೂಡ ಇಲ್ಲಿನ ಸಮುದಾಯದವರೊಂದಿಗೆ ಕಲೆತು, ಬೆರತು ತಾವೂ ಬೆಳೆದಿದ್ದಾರೆ. ಬೇರೆಯವರನ್ನೂ ಬೆಳೆಸುತ್ತಿದ್ದಾರೆ. ಬೇರೆ ಸಮುದಾಯದವರನ್ನು ಗೌರವಿಸುವುದರಿಂದ ನಾವೂ ಬೆಳಯಬಹುದು, ನಮ್ಮ ಭಾಷೆಯನ್ನೂ ಬೆಳೆಯಬಹುದು ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆ ಉತ್ತಮ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾರಿ ಸಮುದಾಯದವರಲ್ಲಿ ಭಾಷಾಭಿಮಾನ ಹೆಚ್ಚಾಗಿದೆ. ಭಾಷಾಭಿಮಾನ ಇರುವ ಯಾವ ಭಾಷೆಗೂ ಸಾವು, ಅಳಿವಿನ ಭಯ ಇರುವುದಿಲ್ಲ ಎಂದ ಅವರು, ಬ್ಯಾರಿ ಎಂದರೆ ಕೇವಲ ಭಾಷೆ ಅಲ್ಲ, ಬ್ಯಾರಿ ಸಮುದಾಯ ತನ್ನದೇಯಾದ ಆಚಾರ, ವಿಚಾರ, ಕಲೆ, ಸಂಸ್ಕೃತಿ, ಪರಂಪರೆ ಹೊಂದಿದ್ದು, ಕನ್ನಡ, ತುಳು ಸೇರಿದಂತೆ ಹಲವಾರು ನೆರೆಹೊರೆಯ ಭಾಷೆಯೊಂದಿಗೆ ಬ್ಯಾರಿ ಸಮುದಾಯ ಮತ್ತು ಭಾಷೆ ಅವಿನಾಭಾವ ಸಂಬಂಧ ಇದ್ದು, ಸಮುದಾಯ ವಿಶಿಷ್ಟ ಪರಂಪರೆಯಾಗಿದೆ. ಆಧುನಿಕತೆ, ಪಾಶ್ಚಿಮಾತ್ಯ ಸಂಸ್ಕೃತಿಯ ಮಧ್ಯೆ ಬ್ಯಾರಿ ಪರಂಪರೆ ನಾಶವಾಗುವುದನ್ನು ತಡೆಯಲು ಈ ಪರಂಪರೆಯ ಬಗ್ಗೆ ಯುವಪೀಳಿಗೆಗೆ ಜಾಗೃತಿ ಮೂಡಿಸಬೇಕು. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಹೋರಾಟದ ಇತಿಹಾಸವಿದ್ದರೂ ಇತರ ಭಾಷೆಗಳ ಸಾಹಿತ್ಯಿಕ ಅಕಾಡೆಮಿಗಳ ಪ್ರೋತ್ಸಾಹ ಕೂಡ ಬ್ಯಾರಿ ಭಾಷೆಯ ಏಳಿಗೆಗೆ ಕಾರಣವಾಗಿದೆ. ಬ್ಯಾರಿ ಭಾಷೆ ಬ್ಯಾರಿಗಳಿಗೆ ಸೀಮಿತವಾಗದೇ ಬೇರೆ ಭಾಷಿಕರಿಗೂ ನಮ್ಮ ಭಾಷೆಯನ್ನು ಕಲಿಸುವ ಕೆಲಸವಾದಾಗ ಮಾತ್ರ ಈ ಭಾಷೆ ಬೆಳೆಯುತ್ತದೆ ಎಂದರು.
ಆಧುನಿಕ ಯುಗದಲ್ಲಿ ಉದ್ಯೋಗವಾಕಾಶದ ಪೈಪೋಟಿ ಹೆಚ್ಚಿದೆ. ಒಂದೇ ಭಾಷೆಯ ಕಲಿಕೆಯಿಂದ ಹಲವು ಸಮಸ್ಯೆ ಎದುರಾಗುತ್ತದೆ. ನಾವು ಒಂದು ಭಾಷೆಗೆ ಸೀಮಿತವಾಗದೇ ಮಾತೃ ಭಾಷೆಯೊಂದಿಗೆ ಜಾಗತಿಕ ಭಾಷೆಗಳನ್ನೂ ಕಲಿಯಬೇಕು, ಬೇರೆ ದೇಶಗಳ ಭಾಷೆಗಳನ್ನು ಕಲಿಯುವುದರಿಂದ ಜಾಗತಿಕವಾಗಿ ಅವಕಾಶಗಳ ವೇದಿಕೆಯನ್ನು ಸೃಷ್ಟಿಸಿಕೊಳ್ಳಲು ಸಾಧ್ಯ. ಇದರಿಂದ ಬ್ಯಾರಿ ಸಮುದಾಯ ಹಾಗೂ ಬ್ಯಾರಿ ಭಾಷೆಯನ್ನು ಜಗತ್ತಿಗೆ ಪಸರಿಸಲೂ ಸಾಧ್ಯವಿದೆ. ಬ್ಯಾರಿ ಸಮುದಾಯದ ಅಭಿವೃದ್ಧಿ ಹಾಗೂ ಭಾಷೆಯನ್ನು ಬೆಳೆಸುವಲ್ಲಿ ಸಮುದಾಯದ ಯುವಜನಾಂಗದ ಪಾತ್ರ ಮುಖ್ಯವಾಗಿದೆ. ಧ್ವೇಷ ರಹಿತ ಸಮಾಜ ನಿರ್ಮಾಣದ ಜವಬ್ದಾರಿ ಸಮುದಾಯದ ಪ್ರತಿಯೊಬ್ಬರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕರಾವಳಿ, ಮಲೆನಾಡು ಭಾಗದಲ್ಲಿ ಇತರ ಭಾಷಿಕರೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವ ಬ್ಯಾರಿ ಸಮುದಾಯ ಸಮಾಜದ ಅವಿಭಾಜ್ಯ ಅಂಗವಾಗಿದೆ. ಬ್ಯಾರಿ ಭಾಷೆಗೆ ಸೂಕ್ತ ಸ್ಥಾನಮಾನ, ಪಠ್ಯಪುಸ್ತಕದಲ್ಲೂ ಬ್ಯಾರಿ ಭಾಷೆ ಸೇರ್ಪಡೆಯಂತಹ ಬೇಡಿಕೆಗಳು ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ. ಈ ವಿಚಾರವಾಗಿ ಸಿಎಂ ಬಳಿ ಚರ್ಚಿಸಲಾಗುವುದು ಎಂದ ಅವರು, ಚಿಕ್ಕಮಗಳೂರು ಕ್ಷೇತ್ರದಲ್ಲಿರುವ ಬ್ಯಾರಿ ಸಮುದಾಯದವರ ಅಭಿವೃದ್ಧಿಗೆ ಸರಕಾರಿ ಜಾಗ ಮಂಜೂರು ಮಾಡಲು ಕ್ರಮವಹಿಸಲಾಗುವುದು. ಸಮುದಾಯದ ಜನರಿಗೆ ನಿವೇಶನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ನಾಸಿರ್ ಮಾತನಾಡಿ, ಬ್ಯಾರಿ ಸಮುದಾಯದವರು ಮತ್ತು ಬ್ಯಾರಿ ಭಾಷೆಯ ಅಭಿವೃದ್ಧಿಗೆ ಒಕ್ಕೂಟದಿಂದ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲೆಯ ಹಮ್ಮಿಕೊಳ್ಳಲಾಗುತ್ತಿದ್ದು, ಸಮುದಾಯದವರ ಅಭಿವೃದ್ಧಿಗಾಗಿ ಚಿಕ್ಕಮಗಳೂರು ನಗರದಲ್ಲಿ ಸಮುದಾಯ ಭವನದ ಅಗತ್ಯತೆ ಇದೆ, ಇದಕ್ಕೆ ಸರಕಾರ ನಿವೇಶನ 5ಎಕರೆ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕೆ.ಅಬ್ಬಾಸ್, ಬ್ಯಾರಿ ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು, ರಾಜ್ಯದಲ್ಲಿ 30 ಲಕ್ಷ ಬ್ಯಾರಿ ಭಾಷಿಗರಿದ್ದು, ಈ ಭಾಷೆಯನ್ನು 8ನೇ ಪರಿಚ್ಚೇಧಕ್ಕೆ ಸೇರ್ಪಡೆ ಮಾಡಬೇಕು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಬ್ಯಾರಿ ಸಮುದಾಯದವರಿಗೆ ಯಾವ ಸೌಲಭ್ಯವೂ ಸಿಗದಂತಾಗಿದ್ದು, ರಾಜ್ಯ ಸರಕಾರ ಪ್ರತ್ಯೇಕವಾಗಿ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ವಿಧಾನಸಭೆ ಸಭಾಪತಿ ರಾಜ್ಯ ಸರಕಾರದ ಗಮನಸೆಳೆಯಬೇಕೆಂದು ಮನವಿ ಮಾಡಿದರು.
ಆಶಯ ಭಾಷಣ ಮಾಡಿದ ಬ್ಯಾರಿ ಸಮುದಾಯದ ಹಿರಿಯ ಸಾಹಿತಿ ಶಂಷುದ್ದೀನ್ ಮಡಿಕೇರಿ, ಬ್ಯಾರಿ ಭಾಷೆ ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿದ್ದು, ಪಂಚ ದ್ರಾವಿಡ ಭಾಷೆಗಳಲ್ಲಿ ಬ್ಯಾರಿ ಭಾಷೆ ಸ್ವತಂತ್ರ ಭಾಷೆಯಾಗಿದೆ. ಬ್ಯಾರಿ ಸಮುದಾಯ ಕೀಳರಿಮೆ ಬಿಟ್ಟು ಶಿಕ್ಷಣದ ಮೂಲಕ ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಸಮುದಾಯದವರು ರಾಜಕೀಯ, ಸಾಹಿತ್ಯ, ಸಿನೆಮಾ, ಸಮಾಜಸೇವೆ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಉನ್ನತ ಹುದ್ದೆ, ಸ್ಥಾನ ಮಾನಗಳನ್ನೂ ಅಲಂಕರಿಸುತ್ತಿದ್ದಾರೆ. ಬ್ಯಾರಿ ಭಾಷೆಯ ಅಭಿವೃದ್ಧಿಗೆ ಈ ಭಾಷೆಯನ್ನು ಸ್ವತಂತ್ರ ಭಾಷೆಯನ್ನಾಗಿ ಬೆಳೆಸಲು ಪ್ರಯತ್ನಗಳು ನಡೆಯಬೇಕು. ಬ್ಯಾರಿ ಭಾಷೆಗೆ ಲಿಪಿ ಕಂಡುಕೊಳ್ಳುವ ಕೆಲಸ ಮುಖ್ಯವಾಗಿ ಆಗಬೇಕು ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಜಿಲ್ಲಾಮಟ್ಟದ ದಫ್ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ಬ್ಯಾರಿ ಕವಿಗೋಷ್ಠಿ ನಡೆಯಿತು. ಜಿಲ್ಲಾ ಬ್ಯಾರಿಗಳ ಒಕ್ಕೂಟದ ಗೌರವಾಧ್ಯಕ್ಷ ರಹೀಮ್ ಶೇಕ್ ಬ್ಯಾರಿ, ಉಪಾಧ್ಯಕ್ಷರಾದ ಫಾರೂಕ್, ಅಬ್ದುಲ್ ವಾಹೀದ್, ಅಬ್ಬಾಸ್ ಬಕ್ರಹಳ್ಳಿ, ಅಹ್ಮದ್ ಬಾವ ಬಿಳಗುಳ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಬಿ.ಎಸ್.ಮುಹಮ್ಮದ್, ಮಾಜಿ ಸದಸ್ಯ ಸಿ.ಕೆ.ಇಬ್ರಾಹೀಂ, ಶೇಖಬ್ಬ, ಅಬ್ದುಲ್ ರಜಾಕ್, ಜಿಲ್ಲಾ ಬ್ಯಾರಿ ಒಕ್ಕೂಟದ ಮಾಜಿ ಗೌರವಾಧ್ಯಕ್ಷ ಖಲಂದರ್, ಮಾಜಿ ಉಪಾಧ್ಯಕ್ಷ ಬದ್ರಿಯಾ ಮುಹಮ್ಮದ್, ಮಾಜಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್, ನಗರಸಭೆ ಸದಸ್ಯರಾದ ಮುನೀರ್, ಖಲಂದರ್ ಉಪ್ಪಳ್ಳಿ, ಚಿಕ್ಕಮಗಳೂರು ತಾಲೂಕು ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಇಬ್ರಾಹೀಂ, ಮಲ್ನಾಡ್ ಗಲ್ಫ್ ಟ್ರಸ್ಟ್ ಅಧ್ಯಕ್ಷ ಅಕ್ರಂ ಹಾಜಿ, ಮೂಡಿಗೆರೆ ತಾಲೂಕು ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ರಫೀಕ್, ಮುಖಂಡರಾದ ಇಬ್ರಾಹೀಂ ಶಾಫಿ, ನೌಶದ್ ಅಲಿ, ಬಿ.ಮುಹಮ್ಮದ್, ಸಮೀರ್ ಮುಲ್ಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತ ಸಮುದಾಯದವರಲ್ಲಿ ಬ್ಯಾರಿ ಸಮುದಾಯದವರು ಅಲ್ಪಸಂಖ್ಯಾತ ಸಮುದಾಯವಾಗಿದೆ. ಇಂತಹ ಸಮುದಾಯದಿಂದ ಬಂದಿರುವ ನನಗೆ ಕಾಂಗ್ರೆಸ್ ಅತ್ಯುನ್ನತ ಸ್ಥಾನಮಾನಗಳನ್ನು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಅತ್ಯಂತ್ರ ಜವಬ್ದಾರಿಯುತ ಖಾತೆಯ ಸಚಿವರನ್ನಾಗಿ ಮಾಡಿದೆ. ಈ ಬಾರಿ ವಿಧಾನಸಭೆಯ ಸ್ಪೀಕರ್ ಆಗಿ ನೇಮಿಸಿ ಸಮುದಾಯದಕ್ಕೆ ಮಹತ್ತರವಾದ ಕೊಡುಗೆ ನೀಡಿದೆ. ಸಾಧನೆಯ ಶಕ್ತಿ ಎಲ್ಲರಲ್ಲೂ ಇದೆ, ಪ್ರಯತ್ನ ಇದ್ದಲ್ಲಿ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಸಮುದಾಯದ ಜನರು ಶಿಕ್ಷಣ, ಸಂಘಟನೆ ಮೂಲಕ ಸಾಧನೆಗೆ ಒತ್ತು ನೀಡಬೇಕು.
- ಯು.ಟಿ.ಖಾದರ್, ವಿಧಾನಸಭೆ ಸಭಾಪತಿ