ಚಿಕ್ಕಮಗಳೂರು | ಸರಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ; ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿದ ಶಿಕ್ಷಕಿಯರು

ಚಿಕ್ಕಮಗಳೂರು : ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸರಕಾರಿ ಶಾಲೆಯೊಂದಕ್ಕೆ ಅದೇ ಶಾಲೆಯ ಇಬ್ಬರು ಶಿಕ್ಷಕಿಯರು ತಮ್ಮ ಸ್ವಂತ ದುಡಿಮೆಯ 2.50 ಲಕ್ಷ ರೂ. ಖರ್ಚು ಮಾಡಿ ಕೊಳವೆಬಾವಿ ಕೊರೆಯಿಸಿರುವ ಘಟನೆ ತಾಲೂಕಿನ ಮಾಚಗೊಂಡನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಹೀನಾ ತಬಸ್ಸುಮ್ ಹಾಗೂ ರಝಿಯಾ ಸುಲ್ತಾನ ಅವರ ಪ್ರಯತ್ನದ ಫಲವಾಗಿ ಸರಕಾರಿ ಶಾಲೆಯ ಮಕ್ಕಳು ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದಕ್ಕಿದಂತಾಗಿದೆ.
ಮಾಚಗೊಂಡನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಮಕ್ಕಳು ಮೊದಲಿನಿಂದಲೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸತ್ತಿಹಳ್ಳಿ ಗ್ರಾಪಂ ವತಿಯಿಂದ ಈ ಶಾಲೆಗೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಈ ನೀರು ಶಾಲೆಯ 250 ಮಕ್ಕಳಿಗೆ ಸಾಲದಂತಾಗಿದೆ. ಸದ್ಯ ಬೇಸಿಗೆ ಕಾಲ ಇರುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ನೀರಿನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು, ಬಿಸಿಯೂಟ ತಯಾರಿಗೆ ಹಾಗೂ ಶಿಕ್ಷಕರಿಗೂ ಕುಡಿಯುವ ನೀರು ಸಾಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಖ್ಯವಾಗಿ ಶಾಲಾ ಮಕ್ಕಳಿಗೆ ಶೌಚಾಲಯಕ್ಕೂ ನೀರು ಸಾಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾಲಾ ಮಕ್ಕಳು, ಬಿಸಿಯೂಟ ಸಿಬ್ಬಂದಿ ಅನುಭವಿಸುತ್ತಿದ್ದ ನೀರಿನ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದ ಶಾಲೆಯ ಈ ಶಿಕ್ಷಕಿಯರು ತಮ್ಮ ಸ್ವಂತ ಹಣ ಬಳಸಿ ಶಾಲಾ ಆವರಣದಲ್ಲಿ ಕೊಳವೆಬಾವಿಯೊಂದನ್ನು ಕೊರೆಸಿ ನೀರಿನ ಸಮಸ್ಯೆಯ ಪರಿಹಾರಕ್ಕೆ ಚಿಂತಿಸಿದ್ದರು. ಅದರಂತೆ ಇಬ್ಬರು ಶಿಕ್ಷಕಿಯರು ತಮ್ಮ ಸ್ವಂತ 2.50 ಲಕ್ಷ ರೂ. ಬಳಸಿ ಕೊಳವೆ ಬಾವಿಯನ್ನು ಕೊರೆಸುವ ಮೂಲಕ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ರಮಝಾನ್ ಮಾಸದಲ್ಲಿ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ಅದರಂತೆ ಈ ಶಾಲಾ ಮಕ್ಕಳು ಅನುಭವಿಸುತ್ತಿದ್ದ ನೀರಿನ ಸಮಸ್ಯೆಗೆ ಏನಾದರೂ ಮಾಡಿ ಪರಿಹಾರ ಒದಗಿಸಬೇಕೆಂದು ಯೋಚಿಸಿದ್ದೆ. ನಾನು ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ವರ್ಷ ಕೆಲಸ ಮಾಡಿದ ಶಾಲೆಗೆ ಏನಾದರೂ ಸಹಾಯ ಮಾಡಬೇಕೆಂದು ಅಂದು ಕೊಂಡಿದ್ದ ಸಮಯದಲ್ಲಿ ರಝಿಯಾ ಸುಲ್ತಾನ ಎಂಬ ಶಿಕ್ಷಕಿ ಈ ಶಾಲೆಗೆ ವರ್ಗಾವಣೆಗೊಂಡು ಎರಡು ವರ್ಷಗಳ ಹಿಂದೆ ಬಂದಿದ್ದರು. ಅವರ ಬಳಿ ಚರ್ಚಿಸಿ ನೀರಿನ ಸಮಸ್ಯೆ ಬಗ್ಗೆ ಹೇಳಿದ್ದೆ. ಅವರು ನಾನು ಸಹ ಧನ ಸಹಾಯ ಮಾಡುತ್ತೇನೆ. ಇಬ್ಬರು ಸೇರಿ ಕೊಳವೆ ಬಾವಿ ಕೊರೆಸೋಣ ಎಂದು ಹೇಳಿದ್ದರು. ನಂತರ ಇಬ್ಬರು ಹಣ ಹೊಂದಿಸಿ ಕೊಳವೆ ಬಾವಿ ಕೊರೆಸಿದ್ದೇವೆ. ಈಗ ಶಾಲೆಯ ಮಕ್ಕಳು ಎದುರಿಸುತ್ತಿದ್ದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಶಿಕ್ಷಕಿ ಹೀನಾ ತಬಸ್ಸುಮ್ ಹೇಳಿದ್ದಾರೆ.
ಶಾಲೆಯ ಆವರಣದಲ್ಲಿ ಕೊಳವೆ ಬಾವಿ ಕೊರೆಸುವ ವಿಚಾರವನ್ನು ಇಬ್ಬರು ಶಿಕ್ಷಕಿಯರು ತಮ್ಮ ಬಳಿ ಚರ್ಚಿಸಿ, ಅದಕ್ಕೆ ತಗಲುವ ವೆಚ್ಚ ಭರಿಸುವುದಾಗಿ ಹೇಳಿದ್ದರಿಂದ ಕೊಳವೆ ಬಾವಿ ಕೊರೆಸಲು ಜಾಗ ಗುರುತು ಮಾಡಿದ್ದೆವು. ನಾವು ಗುರುತಿಸಿದ್ದ ಎರಡು ಪಾಯಿಂಟ್‌ಗಳಲ್ಲೂ ನೀರು ಸಿಗದೆ ವಿಫಲವಾದವು. ಮೂರನೇ ಪಾಯಿಂಟ್‌ನಲ್ಲಿ 1ಇಂಚು ನೀರು ಸಿಕ್ಕಿದೆ. ಕೊಳವೆ ಬಾವಿಗೆ 2 ಲಕ್ಷ ರೂ., ಮೋಟರ್ ಅಳವಡಿಕೆಗೆ 50 ಸಾವಿರ ರೂ. ಖರ್ಚಾಗಿದೆ. ಶಾಲಾ ಮಕ್ಕಳ ಕಷ್ಟ ನೋಡಿ ಅದಕ್ಕೆ ಸ್ಪಂದಿಸಿರುವ ಇಂತಹ ಶಿಕ್ಷಿಕಿಯರು ಎಲ್ಲರಿಗೂ ಮಾದರಿ ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯ ಅಣ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಚಗೊಂಡನಹಳ್ಳಿ ಸರಕಾರಿ ಶಾಲೆ ಆರಂಭದಿಂದಲೂ ನೀರಿನ ಸಮಸ್ಯೆ ಎದುರಿಸುತ್ತಿದೆ. ನೀರಿನ ಸಮಸ್ಯೆ ಪರಿಹರಿಸುವಂತೆ ಸತ್ತಿಹಳ್ಳಿ ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ, ಶಾಲೆಯ ಶಿಕ್ಷಕಿಯರಾದ ಹೀನಾ ತಬಸ್ಸುಮ್ ಮತ್ತು ರಝಿಯಾ ಸುಲ್ತಾನ ಎಂಬವರು ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸುವ ಮೂಲಕ ಶಾಲಾ ಮಕ್ಕಳ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ. ಇಂತಹ ಶಿಕ್ಷಕಿಯರ ಸೇವೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು.
ಎಸ್.ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ, ಮಾಚಗೊಂಡನಹಳ್ಳಿ ಸರಕಾರಿ ಶಾಲೆ