ಚಿಕ್ಕಮಗಳೂರಿನಲ್ಲಿ ಭಾರೀ ಮಳೆ | ರಸ್ತೆ ಸಂಪರ್ಕ ಕಡಿತ: ಅನಾರೋಗ್ಯ ಪೀಡಿತ ವೃದ್ಧೆಯನ್ನು 3 ಕಿಮೀ ಹೊತ್ತು ಆಸ್ಪತ್ರೆಗೆ ಸಾಗಾಟ
ಚಿಕ್ಕಮಗಳೂರು, ಸೆ.26: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಸಂಜೆ, ರಾತ್ರಿ ವೇಳೆ ಭಾರೀ ಮಳೆ ಸುರಿಯುತ್ತಿದ್ದು, ಪ್ರಮುಖ ನದಿಗಳು ತುಂಬಿ ಹರಿಯಲಾರಂಭಿಸಿವೆ. ನದಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಕೆಲ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಗ್ರಾಮಸ್ಥರು ರಸ್ತೆ ಸಂಪರ್ಕಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕಳಸ ತಾಲೂಕು ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದೇ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಕುಟುಂಬಸ್ಥರು 3 ಕಿ.ಮೀ. ದೂರು ಹೊತ್ತುಕೊಂಡೇ ಆಸ್ಪತ್ರೆಗೆ ಸೇರಿಸಿದ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ತುಂಗಾ, ಭದ್ರಾ, ನದಿಗಳಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದೆ. ಕಳಸ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕುದುರೆಮುಖ, ಸಂಸೆ, ನಲ್ಲಿಬೀಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿಲ್ಲಿಬೀಡು, ಕಟ್ಟೆಮನೆ, ಅಜ್ಜಿಗದ್ದೆ, ಅರೊಳ್ಳಿ, ಕೋಣೆಮನೆ ಸೇರಿದಂತೆ ಕೆಲ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಲ್ಲಿಬೀಡು ಗ್ರಾಮ ಸಂಪರ್ಕ ಕಡಿತಗೊಂಡಿದ್ದರಿಂದ ಬೇರೆ ರಸ್ತೆ ಸೌಲಭ್ಯ ಇಲ್ಲದ ಕಾರಣ ಬುಧವಾರ ಸಂಜೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರನ್ನು ಗ್ರಾಮಸ್ಥರು, ಕುಟುಂಬಸ್ಥರು ಸೇರಿ 3 ಕಿ.ಮೀ. ವರೆಗೆ ಹೊತ್ತು ನಂತರ ವಾಹನದ ಮೂಲಕ ಕಳಸ ಆಸ್ಪತ್ರೆಗೆ ದಾಖಲಿಸಿದ ಘಟನೆ ವರದಿಯಾಗಿದೆ.
ನೆಲ್ಲಿಬೀಡು ಗ್ರಾಮದ ಪಕ್ಕದಲ್ಲಿ ಭದ್ರಾ ನದಿ ಹರಿಯುತ್ತಿದ್ದು, ಈ ಗ್ರಾಮ ಸಂಪರ್ಕಕ್ಕೆ ತೂಗುಸೇತುವೆ ಇದ್ದು, ಅದು ಕೂಡಾ ಶಿಥಿಲಗೊಂಡಿದೆ. ಆದ್ದರಿಂದ ಸುಸಜ್ಜಿತ ಸೇತುವೆ ನಿರ್ಮಿಸಬೇಕೆಂದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಿದ ಪರಿಣಾಮ ಇಲ್ಲಿನ ನಿವಾಸಿಗಳ ಸೇತುವೆ ಕನಸು ಇಂದಿಗೂ ಮರಿಚೀಕೆಯಾಗಿದೆ. ಬುಧವಾರ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೂ ಅನಾರೋಗ್ಯ ಪೀಡಿತ ವೃದ್ಧೆಯನ್ನು ಕುಟುಂಬಸ್ಥರು 3ಕಿಮೀ ಹೊತ್ತು ಸಾಗಿಸಿದ್ದು, ದಾರಿಮಧ್ಯೆ ಇರುವ ಶಿಥಿಲಗೊಂಡಿದ್ದ ಸೇತುವೆ ಮೇಲೆ ಹರಸಾಹಸಪಟ್ಟು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೌಲಭ್ಯ ಒದಗಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.