ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಕಾಫಿನಾಡು ಚಿಕ್ಕಮಗಳೂರಿಗೆ ತಂಪೆರೆದ ಮಳೆ
ಚಿಕ್ಕಮಗಳೂರು: ಬಿಸಿಲ ಧಗೆಯಿಂದ ರೋಸಿ ಹೋಗಿದ್ದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಲ್ಲಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಗುಡುಗು, ಸಿಡಿಲು, ಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆಯಿಂದಾಗಿ ಜಿಲ್ಲೆಯ ಜನರು ನಿಟ್ಟುಸಿರುವ ಬಿಟ್ಟಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಸೂರ್ಯನ ರಣ ಬಿಸಿಲ ಕಾವಿಗೆ ಕಾದು ಕೆಂಡದಂತಾಗಿದ್ದ ಕಾಫಿನಾಡಿಲ್ಲಿ ತಾಪಮಾನ ಸಹಿಸಲಾಗದೇ ಜನ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಮೊದಲ ಬಾರಿಗೆ 40ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ಜಿಲ್ಲೆಯಲ್ಲಿ ದಾಖಲಾದ ಪರಿಣಾಮ ಬಿಸಿಲು ಹಾಗೂ ಬಿಸಿ ಗಾಳಿಗೆ ರೋಸಿ ಹೋಗಿದ್ದ ಜನರಿಗೆ ಈ ಮಳೆಯ ಸಿಂಚನ ತಂಪಿನ ಅನುಭವ ನೀಡಿದ್ದು, ಸಾರ್ವಜನಿಕರು, ರೈತರು, ಕಾಫಿ, ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಬೀರಲು ಕಾರಣವಾಗಿದೆ.
ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸಂಜೆ ವೇಳೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತಾದರೂ ಮಳೆಯ ಸಿಂಚನವಾಗದ ಪರಿಣಾಮ ಸಾರ್ವಜನಿಕರು, ರೈತರಲ್ಲಿ ನಿರಾಶೆ ಮನೆ ಮಾಡಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಜಿಲ್ಲೆಯ ಅಲ್ಲಲ್ಲಿ ಮಳೆ ಅರಂಭವಾಗಿದ್ದು, ನೋಡ ನೋಡುತ್ತಿದ್ದಂತೆ ಗುಡುಗು, ಸಿಡಿಲು ಸಹಿತ ಸುಮಾರು 2 ಗಂಟೆಗಳ ಮಳೆಯಾಗಿದೆ.
ಮಂಗಳವಾರ ಮಧ್ಯಾಹ್ನ 2ಕ್ಕೆ ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ಸುಮಾರು 2 ಗಂಟೆಗಳ ಕಾಲ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ರಸ್ತೆಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ವಾಹನಗಳ ಸಂಚಾರವೂ ಸ್ತಬ್ಧಗೊಂಡಿತ್ತು. ಮಳೆಯ ಆರ್ಭಟದೊಂದಿಗೆ ಭಾರೀ ಗಾಳಿ ಹಾಗೂ ಸಿಡಿಲಿನ ಹೊಡೆತಕ್ಕೆ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಸಾರ್ವಜನಿಕರು, ಜಾನುವಾರುಗಳ ಪ್ರಾಣಕ್ಕೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಉಳಿದಂತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೇ, ಬಯಲು ಭಾಗದ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯ ಅಲ್ಲಲ್ಲಿ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ.