ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರದಿಂದ 6ನೇ ಬಾರಿ ಅಧಿಸೂಚನೆ
ಸಾರ್ವಜನಿಕರು, ಸಂಘ, ಸ್ಥಳೀಯ ಸಂಸ್ಥೆಗಳಿಂದ ಆಕ್ಷೇಪಣಾ ಸಲ್ಲಿಕೆಗೆ ಮನವಿ
ಎಸ್.ವಿಜಯ್ಕುಮಾರ್
ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ಜಾರಿಗಾಗಿ ಕೇಂದ್ರ ಸರಕಾರ 6ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಕೆಲವೇ ದಿನ ಬಾಕಿ ಇರುವುದರಿಂದ ವರದಿ ವ್ಯಾಪ್ತಿಯ ಗ್ರಾಮಗಳ ಜನತೆ, ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಕೂಡಲೇ ವರದಿಯಲ್ಲಿರುವ ನ್ಯೂನತೆಗಳನ್ನು ಪಟ್ಟಿ ಮಾಡಿ ಕೇಂದ್ರ ಪರಿಸರ ಇಲಾಖೆಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಅರಣ್ಯ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಯ ಬಫರ್ರೆನ್ ವ್ಯಾಪ್ತಿಯಲ್ಲಿರುವ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ಗಳೂ ವರದಿ ವಿರೋಧಿ ಆಕ್ಷೇಪಣೆ ಸಲ್ಲಿಸಿ ಮಲೆನಾಡಿನ ರೈತರು, ಸಾರ್ವಜನಿಕರ ಬದುಕು ಉಳಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ದೇಶದ ಯಾವುದೇ ಮೂಲೆಯಲ್ಲಿ ಪ್ರಾಕೃತಿಕ ವಿಕೋಪಗಳ ಸಂಭವಿಸಿದ ಸಂದರ್ಭದಲ್ಲಿ ಇದಕ್ಕೆ ಪಶ್ಚಿಮ ಘಟ್ಟದಲ್ಲಿರುವ ಮಲೆನಾಡಿನ ಜನರೇ ಕಾರಣ ಎಂದು ದೂಷಿಸಲಾಗುತ್ತಿದೆ. ವಯನಾಡ್ ದುರಂತದ ಬಳಿಕ ಪಶ್ಚಿಮಘಟ್ಟ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕೆಂದು ಹುಯಿಲೆಬ್ಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಗಾಗಿ 6ನೇ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕೆಲವೇ ದಿನ ಬಾಕಿ ಇದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ನಗರ, ಸ್ಥಳೀಯ ಸಂಸ್ಥೆಗಳು ವರದಿಯಲ್ಲಿರುವ ಲೋಪಗಳನ್ನು ಪಟ್ಟಿ ಮಾಡಿ ಕೂಡಲೇ ಕೇಂದ್ರ ಪರಿಸರ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಮುಂದಾಗಬೇಕೆಂದರು.
ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ವರದಿಯಾಗಿದೆ. ಸ್ಯಾಟಲೈಟ್ ಮೂಲಕ ಸರ್ವೇ ಕಾರ್ಯ ನಡೆಸಿ ರೈತರ ಕೃಷಿ ಭೂಮಿ, ಕಾಫಿ, ಅಡಿಕೆ ತೋಟಗಳನ್ನು ಸೇರಿಸಿ ವರದಿ ತಯಾರಿಸಲಾಗಿದೆ. ಈ ವರದಿಯಲ್ಲಿ ಮಲೆನಾಡು ಭಾಗದ ನೂರಾರು ಜನವಸತಿ ಇರುವ ಗ್ರಾಮಗಳನ್ನೂ ಸೇರಿಸಲಾಗಿದ್ದು, ಈ ಅವೈಜ್ಞಾನಿಕ ವರದಿ ಜಾರಿಯಾದಲ್ಲಿ ಪಶ್ಚಿಮಘಟ್ಟ ಪ್ರದೇಶದ ನೂರಾರು ಗ್ರಾಮಗಳು, ಕೃಷಿ ಭೂಮಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಕಳೆದ 12 ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಹವಣಿಸುತ್ತಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದರೂ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವ ಭರವಸೆಯನ್ನು ಸರಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಡದಿರುವುದು ವಿಪರ್ಯಾಸ. ಅಸಲಿಗೆ ಕಸ್ತೂರಿ ರಂಗನ್ ವರದಿಯಲ್ಲಿರುವ ಅಂಶಗಳ ಬಗ್ಗೆ ರಾಜಕಾರಣಿಗಳಿಗೆ ಮಾಹಿತಿಯೇ ಇಲ್ಲ ಎಂದು ವಿಜಯ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಕಸ್ತೂರಿರಂಗನ್ ವರದಿ ಎನ್ಜಿಒಗಳ ಪ್ರಾಯೋಜಿತ ವರದಿಯಾಗಿದೆ. ಅಮೆರಿಕದಂತಹ ದೇಶಗಳಲ್ಲಿರುವ ಭಾರೀ ಶ್ರೀಮಂತ ಕಂಪೆನಿಗಳ ಒತ್ತಡಕ್ಕೆ ಮಣಿದು ಸರಕಾರಗಳು ಈ ವರದಿಯನ್ನು ಜಾರಿ ಮಾಡಲು ಹುನ್ನಾರ ನಡೆಸಿವೆ. ಅರಣ್ಯ ನಾಶ ಮಾಡಿ ಪರಿಸರದಲ್ಲಿನ ಪ್ರತಿಕೂಲ ಪರಿಸ್ಥಿತಿಗೆ ಕಾರಣವಾಗಿರುವ ಈ ಕಂಪೆನಿಗಳು ಬಡ ರಾಷ್ಟ್ರಗಳಲ್ಲಿರುವ ಅರಣ್ಯ ಸಂರಕ್ಷಣೆ ಮಾಡುವ ನೆಪದಲ್ಲಿ ಎನ್ಜಿಒಗಳ ಮೂಲಕ ಇಂತಹ ವರದಿಯನ್ನು ನಮ್ಮ ದೇಶದಲ್ಲಿ ಜಾರಿ ಮಾಡಲು ಮುಂದಾಗಿವೆ. ಈ ಮೂಲಕ ಪಶ್ಚಿಮಘಟ್ಟ, ಮಲೆನಾಡಿನ ಜನರ ಬದುಕು ನಾಶ ಮಾಡಲು ಹೊರಟಿವೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಘು, ಪ್ರವೀಣ್, ಮುನ್ನಾ, ರವಿ, ಮೊಯಿನ್ ಮತ್ತಿತರರು ಉಪಸ್ಥಿತರಿದ್ದರು.
ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ರಾಜ್ಯ ಸರಕಾರ ಕೂಡಲೇ ಸ್ಪಷ್ಟನೆಯನ್ನು ಬಹಿರಂಗಪಡಿಸಬೇಕು. ಈ ಸರ್ವೇಯಲ್ಲಿ ರೈತರ ಹೊಲ, ಜಮೀನು, ತೋಟಗಳನ್ನೂ ಸ್ವಾಭಾವಿಕ ಅರಣ್ಯ ಎಂದು ಬಿಂಬಿಸಲಾಗಿದೆ. ಆದ್ದರಿಂದ ಭೌತಿಕ ಸರ್ವೇ ನಡೆಸಿ ಜನವಸತಿ ಪ್ರದೇಶ, ಕೃಷಿ ಭೂಮಿ, ಗ್ರಾಮ, ಸರಕಾರಿ ಅರಣ್ಯ, ಸಾರ್ವಜನಿಕ ಜಮೀನುಗಳ ಗಡಿ ಗುರುತಿಸಿ ವರದಿಯಿಂದ ಇದನ್ನು ಹೊರಗಿಡಬೇಕು. ವರದಿ ಅಂತಿಮಗೊಳ್ಳುವ ಪ್ರದೇಶದಿಂದ 10 ಕಿ.ಮೀ. ವರೆಗೆ ಬಫರ್ರೆನ್ ಎಂದು ಘೋಷಿಸಿದ್ದು, ಈ ಪ್ರದೇಶವನ್ನು 0 ಕಿಮೀ ಎಂದು ಘೋಷಣೆ ಮಾಡಬೇಕು. ಸಂಜಯ್ಕುಮಾರ್ ನೇತೃತ್ವದ ಸಮಿತಿ ವರದಿ ವ್ಯಾಪ್ತಿಯ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಸರ್ವೇ, ಸಮೀಕ್ಷೆ ನಡೆಸಬೇಕು. ವರದಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನ ರಹಿತರಿಗೆ ನಿವೇಶನಗಳಿಗೆ ಭೂಮಿ ಕಾಯ್ದಿರಿಸಬೇಕು.
- ಎಸ್.ವಿಜಯ್ಕುಮಾರ್