ಚಿಕ್ಕಮಗಳೂರು | ಪೋಷಕರು ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿದ್ದ ಬಾಲಕಿ ಅನುಮಾನಸ್ಪದ ಸಾವು ; ಕೊಲೆ ಶಂಕೆ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಐದು ವರ್ಷದ ಬಾಲಕಿ ಅನುಮಾಸ್ಪದವಾಗಿ ಸಾವನಪ್ಪಿರುವ ಘಟನೆ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ನಡೆದಿದೆ.
ಬಾಲಕಿಯ ಕೆನ್ನೆ ಹಾಗೂ ಮುಖದ ಮೇಲೆ ಗಾಯದ ಗುರುತುಗಳಿದ್ದು, ಕಿವಿಯಲ್ಲಿದ್ದ ಓಲೆ, ಕಾಲಿನಲ್ಲಿದ್ದ ಚೈನು ನಾಪತ್ತೆಯಾಗಿದೆ ಎನ್ನಲಾಗಿದೆ. ಒಡವೆ ಕದ್ದವರೇ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.
ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಮಂಜುನಾಥ ಮತ್ತು ಮಂಗಳ ದಂಪತಿಯ ಐದು ವರ್ಷದ ಮಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ತಂದೆ ತಾಯಿ ಇಬ್ಬರೂ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ತೆಂಗಿನಕಾಯಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಹಾಗೂ ಮಂಗಳ ದಂಪತಿಯು ಮಗುವಿಗೆ ಜ್ವರವಿದ್ದ ಹಿನ್ನೆಲೆ ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದ ವೇಳೆ ಮಗಳು ಮೃತಪಟ್ಟಿರುವುದು ತಿಳಿದಿದೆ.
ಬಾಲಕಿಯ ಸಾವು ಅನುಮಾನದಿಂದ ಕೂಡಿದ್ದು, ಸ್ಥಳಕ್ಕೆ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.