ಚಿಕ್ಕಮಗಳೂರು | ಪರಿಶಿಷ್ಟರ ಕಾಲನಿ ಅಂಗನವಾಡಿಗೆ ಮೂಲಸೌಲಭ್ಯ ನೀಡದಿರಲು ನಿರ್ಣಯ : ಆರೋಪ
ಮೂಗ್ತಿಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲು ದೂರು
![ಚಿಕ್ಕಮಗಳೂರು | ಪರಿಶಿಷ್ಟರ ಕಾಲನಿ ಅಂಗನವಾಡಿಗೆ ಮೂಲಸೌಲಭ್ಯ ನೀಡದಿರಲು ನಿರ್ಣಯ : ಆರೋಪ ಚಿಕ್ಕಮಗಳೂರು | ಪರಿಶಿಷ್ಟರ ಕಾಲನಿ ಅಂಗನವಾಡಿಗೆ ಮೂಲಸೌಲಭ್ಯ ನೀಡದಿರಲು ನಿರ್ಣಯ : ಆರೋಪ](https://www.varthabharati.in/h-upload/2025/01/16/1315714-791a3e9e-0f75-43e7-aae7-fe0996d4abbf.webp)
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಪರಿಶಿಷ್ಟ ಜಾತಿಯ ಮಕ್ಕಳ ಅಂಗನವಾಡಿ ಕೇಂದ್ರ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಅಂಗನವಾಡಿ ಕೇಂದ್ರಕ್ಕೆ ಮೂಲಸೌಕರ್ಯ ನೀಡದೆ ತಾರತಮ್ಯ ಎಸಗುತ್ತಿರುವುದಲ್ಲದೆ ಪರಿಶಿಷ್ಟರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಮೂಗ್ತಿಹಳ್ಳಿ ಗ್ರಾಮದ ಮುಖಂಡ ಎಂ.ಕೆ.ಮಹೇಶ್ ಹಾಗೂ ಗ್ರಾಮದ ಪರಿಶಿಷ್ಟರು ಆರೋಪಿಸಿದ್ದಾರೆ. ಅಲ್ಲದೆ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಿಡಿಒ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸದಸ್ಯತ್ವ ರದ್ದು ಮಾಡಬೇಕೆಂದು ಆಗ್ರಹಿಸಿ ಎಸ್ಪಿಗೆ ದೂರು ನೀಡಿರುವ ಘಟನೆ ತಾಲೂಕಿನಲ್ಲಿ ವರದಿಯಾಗಿದೆ.
ಮೂಗ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ಮತ್ತಾವರ ಗ್ರಾಮದಲ್ಲಿ 1,112 ಜನಸಂಖ್ಯೆ ಇದ್ದು, ಈ ಗ್ರಾಮದಲ್ಲಿರುವ ಪರಿಶಿಷ್ಟರ ಕಾಲನಿಯಲ್ಲಿ 387 ಜನರು ವಾಸವಾಗಿದ್ದಾರೆ. ಕೇಂದ್ರ ಸರಕಾರದ ಐಸಿಡಿಸಿ ಮಾರ್ಗಸೂಚಿಯಂತೆ 400 ಜನಸಂಖ್ಯೆಗೊಂದು ಅಂಗನವಾಡಿ ಕೇಂದ್ರ ತೆರೆಯಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟರ ಕಾಲನಿಯ ಅಂಬೇಡ್ಕರ್ ಭವನದ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರವನ್ನು ತೆರಯಲಾಗಿದ್ದು, ಈ ಹಿಂದೆ ಅಂಗನವಾಡಿ ಕೇಂದ್ರವು ಪರಿಶಿಷ್ಟರ ಕಾಲನಿಗೆ ದೂರದಲ್ಲಿರುವುದು ಹಾಗೂ ಅಂಗನವಾಡಿ ಕೇಂದ್ರಕ್ಕೆ ಹೋಗುವ ದಾರಿ ಕೆರೆ ಏರಿಯ ಮೇಲಿರುವುದರಿಂದ ಮಕ್ಕಳು ಕೆರೆಗೆ ಬಿದ್ದು ಪ್ರಾಣ ಹಾನಿ ಸಂಭವಿಸುವ ಭೀತಿ ಇದ್ದ ಹಿನ್ನೆಲೆಯಲ್ಲಿ ಸಿಎಂ ಜನತಾ ದರ್ಶನದಲ್ಲಿ ಕಾಲನಿ ಸಮೀಪದಲ್ಲೇ ಅಂಗನವಾಡಿ ಕೇಂದ್ರ ತೆರೆಯಬೇಕೆಂದು ಮನವಿ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರಕಾರ 2023ರ ಫೆ.10ರಂದು ಕಾಲನಿಗೆ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಿದೆ. ಸದ್ಯ ಕಾಲನಿಯ ಅಂಬೇಡ್ಕರ್ ಭವನದ ಅಡುಗೆ ಕೊಠಡಿಯಲ್ಲಿ ಕಳೆದ 1ವರ್ಷದಿಂದ ಅಂಗನವಾಡಿ ಕೇಂದ್ರ ಆರಂಭವಾಗಿದ್ದು, ಈ ಅಂಗನವಾಡಿ ಕೇಂದ್ರಕ್ಕೆ ಗ್ರಾಪಂ ಶೇ.18ರ ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಬೇಕೆಂದು ಲಿಖಿತ ಮನವಿ ಮಾಡಲಾಗಿತ್ತು. ಆದರೆ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕೆಲ ಸದಸ್ಯರು ಪರಿಶಿಷ್ಟರ ಕಾಲನಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಯಾವುದೇ ಮೂಲಸೌಕರ್ಯ ಕಲ್ಪಿಸದಂತೆ ನಿರ್ಣಯ ಕೈಗೊಂಡಿರುವುದರಿಂದ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಪಿಡಿಒ ಹಿಂಬರಹ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪರಿಶಿಷ್ಟರ ಕಾಲನಿಯಲ್ಲಿ ಅಂಗನವಾಡಿ ಕೇಂದ್ರ ತೆರೆಯುತ್ತಿರುವ ಬಗ್ಗೆ 2023ರಲ್ಲೇ ಗ್ರಾಪಂಗೆ ಪತ್ರ ಬರೆಯಲಾಗಿದ್ದರೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಅಂಗನವಾಡಿ ತೆರೆಯುತ್ತಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹಿಂಬರಹ ನೀಡಿ ರಾಜಕಾರಣ ಮಾಡುತ್ತಾ ಪರಿಶಿಷ್ಟರ ಮಕ್ಕಳನ್ನು ಜಾತಿಯ ಕಾರಣಕ್ಕೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಪರಿಶಿಷ್ಟರ ಕಾಲನಿಯ ಅಂಗನವಾಡಿ ಕೇಂದ್ರಕ್ಕೆ ಮೂಲಸೌಕರ್ಯ ನೀಡದೆ ತಾರತಮ್ಯ ಮಾಡಿರುವ ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಿ ಸದಸ್ಯತ್ವ ರದ್ದು ಮಾಡಬೇಕು ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಮುಖಂಡ ಹಾಗೂ ಪರಿಶಿಷ್ಟ ಕಾಲನಿ ನಿವಾಸಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.