ಚಿಕ್ಕಮಗಳೂರು: ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ನದಿಗೆ ಬಿದ್ದು ಮೃತ್ಯು
ಚಿಕ್ಕಮಗಳೂರು: ಸೌದೆ ತರಲು ಕಾಡಿಗೆ ಹೋಗಿದ್ದ ವೇಳೆ ಭದ್ರಾ ನದಿಗೆ ಕಾಲು ಜಾರಿ ಬಿದ್ದ ಡಿಪ್ಲೊಮಾ ಓದುತ್ತಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ವರದಿಯಾಗಿದೆ.
ಮೃತ ಯುವಕನನ್ನು ನೆಲ್ಲಿಬೀಡು ಗ್ರಾಮದ ರವಿ ಎಂಬವರ ಪುತ್ರ ಪೃಥ್ವಿರಾಜ್(17) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಮಧ್ಯಾಹ್ನದ ವೇಳೆಯಲ್ಲಿ ತನ್ನ ಮನೆಯ ಸಮೀಪದಲ್ಲೇ ಹರಿಯುವ ಭದ್ರಾ ನದಿ ದಡದಲ್ಲಿರುವ ಕಾಡಿನಿಂದ ಸೌದೆ ತರಲು ಕಾಡಿಗೆ ಹೋಗಿದ್ದ. ನದಿ ನಡದಲ್ಲಿ ನಡೆದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾ ನದಿಗೆ ಬಿದ್ದಿದ್ದಾನೆ. ಈಜಲು ಬಾರದ ಪೃಥ್ವಿರಾಜ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಎನ್ನಲಾಗಿದೆ.
ಸೌದೆ ತರಲು ಹೋಗಿದ್ದ ಪೃಥ್ವಿರಾಜ್ ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಮನೆ ಸಮೀಪದ ಕಾಡು, ನದಿ ತೀರದಲ್ಲಿ ಹುಡುಕಾಡಿದಾಗ ಪೃಥ್ವಿರಾಜ್ ಭದ್ರಾ ನದಿಗೆ ಕಾಲು ಜಾರಿ ಬಿದ್ದಿರುವುದು ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಹಾಗೂ ಕುದುರೆಮುಖ ಪೊಲೀಸರು ಯುವಕನಿಗಾಗಿ ನದಿಯಲ್ಲಿ ಶೋಧ ನಡೆಸಿದ ವೇಳೆ ಯುವಕನ ಮೃತ ದೇಹ ನದಿಯಲ್ಲಿ ಪತ್ತೆಯಾಗಿದೆ. ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂದ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ