ಚಿಕ್ಕಮಗಳೂರು : ಮೊಮ್ಮಗನಿಂದಲೇ ವೃದ್ಧ ದಂಪತಿಯ ಹತ್ಯೆ !
ಸಾಂದರ್ಭಿಕ ಚಿತ್ರ (Meta AI)
ಚಿಕ್ಕಮಗಳೂರು : ಹಣಕಾಸಿನ ವಿಚಾರಕ್ಕೆ ಮೊಮ್ಮಗನೇ ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗಾಮೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಆರೋಪಿಯಾಗಿರುವ ಮೊಮ್ಮಗ ಪರಾರಿಯಾಗಿದ್ದಾನೆ.
ಮೂಲತಃ ಗುಬ್ಬಿಯವರಾದ ಬಸಪ್ಪ(65) ಹಾಗೂ ಅವರ ಪತ್ನಿ ಲಲಿತಮ್ಮ(58) ಮೃತರು ಎಂದು ಗುರುತಿಸಲಾಗಿದೆ. ಈ ವೃದ್ಧ ದಂಪತಿಯನ್ನು ಮೊಮ್ಮಗ ನಿಶಾಂತ್ ಹತ್ಯೆ ಮಾಡಿ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೊಳಗಾಮೆ ಗ್ರಾಮದ ಮೊಗಣ್ಣಗೌಡ ಎಂಬವರ ಕಾಫಿ ತೋಟದಲ್ಲಿ ಕಳೆದ 25 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಈ ವೃದ್ಧ ದಂಪತಿ ಕೊಳಗಾಮೆ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್ ಬಸಪ್ಪನ ಮನೆಗೆ ಬಂದಿದ್ದು, ಮೊಮ್ಮಗನಾದ ನಿಶಾಂತ್ ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲೀಲಪ್ಪ ದಂಪತಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೊಮ್ಮಗ ನಿಶಾಂತ್ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲಲಿತಮ್ಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗುತ್ತಿದ್ದು, ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮಲ್ಲಂದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.