ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ರೈಲು ಸಂಚಾರ ಸೇವೆಗೆ ಶೀಘ್ರ ಚಾಲನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು : ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಶೀಘ್ರ ಹೊಸ ರೈಲು ಸಂಚಾರ ಆರಂಭಕ್ಕೆ ಕ್ರಮವಹಿಸಲಾಗಿದೆ. ಆಗುಂಬೆ-ಚಿಕ್ಕಮಗಳೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವುದು ಮತ್ತು ನಗರದಲ್ಲಿ ಪಾಸ್ಪೋರ್ಟ್ ಕೇಂದ್ರ ಆರಂಭಕ್ಕೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕಳಸ-ದಿಡುಪೆ ರಸ್ತೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಈ ಸಂಬಂಧ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ರೈಲ್ವೆ ಯೋಜನೆ ವಿಸ್ತರಣೆಗೆ ಸಮೀಕ್ಷೆ ನಡೆಸಲಾಗಿದ್ದು, ಕೆಲ ಸಮಸ್ಯೆಗಳಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಲು ರೈಲ್ವೆ ಮಂತ್ರಿಗೆ ಮನವಿ ಮಾಡಿದ್ದು, ಅದಕ್ಕೆ ಕೇಂದ್ರ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ನಗರದ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ಸೇವೆ ಆರಂಭಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು.
ಚಿಕ್ಕಮಗಳೂರು ನಗರದಲ್ಲಿ ಪಾಸ್ಪೋರ್ಟ್ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆ ಇತ್ತು. ಈ ಸಂಬಂಧ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದು, ಅನುಮತಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಶೀಘ್ರ ನಗರದಲ್ಲಿ ಪಾಸ್ಪೋರ್ಟ್ ಕೇಂದ್ರ ಆರಂಭವಾಗಲಿದೆ, ಇದರಿಂದ ಜಿಲ್ಲೆಯ ಜನರಿಗೆ ಭಾರೀ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ಕಳಸ ತಾಲೂಕಿನ ಸಂಸೆ-ದಿಡುಪೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಆ ಭಾಗದ ಜನರಿಂದ ಭಾರೀ ಬೇಡಿಕೆ ಬಂದಿದೆ. ಈ ರಸ್ತೆ ಅಭಿವೃದ್ಧಿಯಿಂದ ಕಳಸ ಭಾಗದ ಜನರಿಗೆ ಮಂಗಳೂರು ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಈ ಸಂಬಂಧ ಯೋಜನಾ ವರದಿ, ಪ್ರಸ್ತಾವ ಸಿದ್ಧಪಡಿಸಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಲಾಗಿದೆ. ಯೋಜನೆ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವುದರಿಂದ ಯಾವ ಜಿಲ್ಲೆಗಳ ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಿಸಬೇಕೆಂಬ ಬಗ್ಗೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಯೋಜನೆಗೆ ಸುಮಾರು 50-55ಕೋಟಿ ಅನುದಾನದಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದ ಅವರು, ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಕೆಲ ಸಮಸ್ಯೆಗಳಿದ್ದು, ಅದನ್ನು ನಿವಾರಿಸಿ ಯೋಜನೆ ಜಾರಿಗೆ ಕ್ರಮವಹಿಸಲಾಗುವುದು ಎಂದರು.
ಕೇಂದ್ರ ಸರಕಾರ ಸೂರ್ಯ ಘರ್ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯನ್ನು ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿರುವವರಿಗೆ ತಲುಪಿಸಲು ಉದ್ದೇಶಿಸಲಾಗಿದೆ. ಯೋಜನೆಯಡಿಯಲ್ಲಿ ಫಲಾನುಭವಿಗಳು ತಮ್ಮ ಮನೆಯ ಮೇಲೆ ಸೋಲಾರ್ ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬೇಕು, ಇದಕ್ಕೆ ಕೇಂದ್ರ ಸರಕಾರ ಬ್ಯಾಂಕ್ಗಳ ಮೂಲಕ 2.6ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಿದ್ದು, 78ಸಾವಿರ ರೂ. ಸಬ್ಸಿಡಿ ಒದಗಿಸಲಾಗುತ್ತದೆ. ಯೋಜನೆಗೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದು, ಶೀಘ್ರ ಫಲಾನುಭವಿಗಳ ಆಯ್ಕೆ ನಡೆಯಲಿದೆ. ನಂತರ ಈ ಸಂಬಂಧ ಕಾರ್ಯಗಾರವೊಂದನ್ನು ಜಿಲ್ಲೆಯಲ್ಲಿ ನಡೆಸಲಾಗುವುದು ಎಂದರು.
ಜೆಜೆಎಂ ಯೋಜನೆಯಲ್ಲಿ ಭಾರೀ ಅವ್ಯವಹಾರ, ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ವ್ಯಾಪಕ ದೂರಗಳು ಕೇಳಿ ಬಂದಿದ್ದು, ಈ ಸಂಬಂಧ ಅಗತ್ಯ ಕ್ರಮಕ್ಕೆ ಸೂಚಿಸಿದ್ದೇನೆ. ಅಕ್ರಮ, ಕಳಪೆ ಕಾಮಗಾರಿಗಳ ವಿರುದ್ಧ ಸಂಬಂಧಿಸಿದ ಇಲಾಖೆಗಳ ಅಧಿಕಾರಿ, ಇಂಜಿನಿಯರ್, ಗುತ್ತಿಗೆದಾರರ ಸಭೆ ನಡೆಸಿ ಅಕ್ರಮದ ವಿರುದ್ಧ ತನಿಕೆ ನಡೆಸಿ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದೇನೆ ಎಂದರು.
ಪಿಎಂ ವಿಶ್ವಕರ್ಮ ಯೋಜನೆ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ 46ಸಾವಿರ ಮಂದಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ 1-3ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 6ಸಾವಿರ ಮಂದಿ ತರಬೇತಿ ಪಡೆದಿದ್ದು, 2ಸಾವಿರ ಮಂದಿಗೆ ಸಾಲ ನೀಡಲಾಗಿದೆ. ಟೆಕ್ಸ್ಟೈಲ್ಸ್ ಪಾರ್ಕ್, ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿಯನ್ನು ಶೀಘ್ರ ಮುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿಗೆ ಕೇಂದ್ರ ಸರಕಾರದಿಂದ ಅನುದಾನ ಮಂಜೂರಾಗಿದ್ದು, ರಾಜ್ಯ ಸರಕಾರದಿಂದಲೂ ಅನುದಾನ ಬರುತ್ತಿದೆ ಎಂದರು.
ದತ್ತಪೀಠವನ್ನು 100ಕೋ. ರೂ. ಅನುದಾನದಲ್ಲಿ ಅಭಿವೃದ್ಧಿಗೆ ಪ್ರಸ್ತಾವ: ಚಿಕ್ಕಮಗಳೂರು ತಾಲೂಕಿನಲ್ಲಿರುವ ದತ್ತಪೀಠವನ್ನು 100ಕೋ. ರೂ. ಅನುದಾನದಲ್ಲಿ ಅಭಿವೃದ್ಧಿಗೆ ಪಡಿಸಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕೇಂದ್ರದ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿದ್ದೆ. ಈ ಸಂಬಂಧ ಜಿಲ್ಲೆಯಿಂದ ಪ್ರಸ್ತಾವ ಸಲ್ಲಿಸಿ ಎಂದು ಸಚಿವರು ಸೂಚಿಸಿದ್ದಾರೆ. ಅದರಂತೆ ಡಿಸಿಯೊಂದಿಗೆ ಚರ್ಚಿಸಿ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದೇನೆ. ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ.
ಕೋಟ ಶ್ರೀನಿವಾಸ್, ಸಂಸದ
ಕ್ಷೇತ್ರದಲ್ಲಿ ಕೆಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. ಅವುಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದ್ದೇನೆ. ಆಗುಂಬೆ-ಚಿಕ್ಕಮಗಳೂರು ಸಂಪರ್ಕ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಬೇಕೆಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದ ಅವರು, ಜಿಲ್ಲೆಗೆ 2 ಹೆಚ್ಚುವರಿ ಅಂಚೆ ಕಚೇರಿಗಳನ್ನು ಕೇಂದ್ರ ಸರಕಾರ ಮಂಜೂರು ಮಾಡಿದೆ. ಜಿಲ್ಲೆಗೆ 3 ಎಫ್ಎಂ ಕೇಂದ್ರಗಳನ್ನೂ ಕೇಂದ್ರ ಸರಕಾರ. ಮಂಜೂರು ಮಾಡಿದೆ.
ಕೋಟ ಶ್ರೀನಿವಾಸ್
ಜಿಲ್ಲೆಯಲ್ಲಿ 217 ಬಿಎಸ್ಸೆನ್ನೆಲ್ ಟವರ್ಗಳಿದ್ದು, ಈ ಪೈಕಿ 20-30ಟವರ್ಗಳಿಗೆ ಬ್ಯಾಟರಿ ಇದ್ದು, ಬಾಕಿ ಟವರ್ಗಳಿಗೆ ಬ್ಯಾಟರಿ ಇರಲಿಲ್ಲ. ಇತ್ತೀಚೆಗೆ ಕೇಂದ್ರ ಸರಕಾರ ಒಮ್ಮೆಗೆ 51ಟವರ್ಗಳಿಗೆ ಬ್ಯಾಟರಿಗಳನ್ನು ಸರಬರಾಜು ಮಾಡಿದೆ. ಹೆಚ್ಚುವರಿ 43 ಬ್ಯಾಟರಿಗಳನ್ನು ಶೀಘ್ರ ಪೂರೈಕೆಗೆ ಕ್ರಮವಹಿಸಲಾಗುವುದು. ಇದರೊಂದಿಗೆ ಜಿಲ್ಲೆಗೆ ಹೆಚ್ಚುವರಿಯಾಗಿ 28 ಟವರ್ಗಳೂ ಮಂಜೂರಾಗಿವೆ. ಈ ಪೈಕಿ 10 ಸ್ಥಳಗಳಲ್ಲಿ 4ಜಿ ಸೇವೆ ನೀಡಲು ಕ್ರಮವಹಿಸಲಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ, ಸಿರಗುಳ, ಬೆರಣಗೋಡು, ಬೊಗಸೆ, ಕಡೂರು ತಾಲೂಕಿನ ಹೆಳವರ ಕಾಲನಿ ಸೇರಿದಂತೆ 28 ಸ್ಥಳಗಳಲ್ಲಿ ಹೊಸದಾಗಿ ಟವರ್ಗಳ ನಿರ್ಮಾಣಕ್ಕೆ ಸರಕಾರ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೇ 36 ಟವರ್ಗಳ ನಿರ್ಮಾಣಕ್ಕೆ ಹೊಸದಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಅನುಮೋದನೆ ನೀಡಿದೆ. ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಭಾರೀ ಸುಧಾರಣೆಗೆ ಕೇಂದ್ರ ಸರಕಾರ ಕ್ರಮವಹಿಸಿದ್ದು, ಖಾಸಗಿಯವರಿಗೆ ತೀವ್ರ ಪೈಪೋಟಿ ಕೊಡುವ ನಿಟ್ಟಿನಲ್ಲಿ ಸಂಸ್ಥೆಯನ್ನು ಕೇಂದ್ರ ಸರಕಾರ ಬೆಳೆಸಲು ಮುಂದಾಗಿದೆ. ಗ್ರಾಹಕರ ಸಮಾವೇಶದ ಮೂಲಕ ಬಿಎಸ್ಸೆನ್ನೆಲ್ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಈ ಟವರ್ಗಳಿಗೆ ಉಪಗ್ರಹ ಸಂಪರ್ಕ ಕಲ್ಪಿಸುವುದಕ್ಕೂ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಕೋಟ ಶ್ರೀನಿವಾಸ್