ಚಿಕ್ಕಮಗಳೂರು | ಹೋಟೆಲ್ ನಲ್ಲಿ ಸೇವಿಸಿದ್ದ ಊಟದ ಬಿಲ್ 35 ವರ್ಷಗಳ ಬಳಿಕ ಪಾವತಿ!
ಮಂಗಳೂರು ದೇರಳಕಟ್ಟೆಯ ಮುಹಮ್ಮದ್ ರ ಪ್ರಾಮಾಣಿಕತೆಗೆ ವ್ಯಾಪಕ ಶ್ಲಾಘನೆ

ಚಿಕ್ಕಮಗಳೂರು: ಹೋಟೆಲೋಂದರಲ್ಲಿ ಊಟ ಮಾಡಿ ಮರೆತು ಬಿಲ್ ನೀಡದೆ ತೆರಳಿದ್ದ ವ್ಯಕ್ತಿಯೊಬ್ಬ 35 ವರ್ಷಗಳ ಬಳಿಕ ಅದೇ ಹೋಟೆಲ್ ಗೆ ಬಂದು ತಾನು ಹಿಂದೆ ಊಟ ಮಾಡಿದ್ದ ಬಿಲ್ ಪಾವತಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆರ ಗ್ರಾಮದಲ್ಲಿ ನಡೆದಿದೆ.
ಮಂಗಳೂರಿನ ದೇರಳಕಟ್ಟೆ ನಿವಾಸಿ ಎಂ.ಎ.ಮುಹಮ್ಮದ್ ಎಂಬವರು 35 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಮೂಡಿಗೆರೆಗೆ ಬಂದಿದ್ದರು. ಕೆಲಸದ ಮುಗಿಸಿ ಊರಿಗೆ ಹಿಂದಿರುಗುವಾಗ ಕೊಟ್ಟಿಗೆಹಾರದಲ್ಲಿರುವ ಹಳೆಯ ಭಾರತ್ ಹೋಟೆಲ್ ನಲ್ಲಿ ಕಡುಬು ಮೀನು ಸಾರು ಊಟ ಮಾಡಿದ್ದರು. ಈ ವೇಳೆ ಗಡಿಬಿಡಿಯಲ್ಲಿ ಊಟದ ಬಿಲ್ ನೀಡಲು ಮರೆತ ಮುಹಮ್ಮದ್ ಅವರು ಬಸ್ ಹತ್ತಿ ಮಂಗಳೂರಿಗೆ ಬಂದಿದ್ದರು. ಊರು ತಲುಪಿದಾಗ ಬಳಿಕ ಅವರಿಗೆ ತಾನು ಕೊಟ್ಟಿಗೆಹಾರದಲ್ಲಿ ಊಟ ಮಾಡಿದ್ದ ಹೋಟೆಲ್ ನಲ್ಲಿ ಬಿಲ್ ನೀಡದಿರುವುದು ನೆನಪಾಗಿತ್ತು. ಈ ಬಗ್ಗೆ ಬೇಸರಗೊಂಡಿದ್ದ ಅವರು ಮತ್ತೊಮ್ಮೆ ಕೊಟ್ಟಿಗೆಹಾರಕ್ಕೆ ಹೋದಾಗ ಬಿಲ್ ನೀಡಿದರೆ ಆಯಿತು ಎಂದು ಅಂದುಕೊಂಡಿದ್ದರು. ಆದರೆ ಅವರಿಗೆ ಕೊಟ್ಟಿಗೆಹಾರದ ಕಡೆ ಬರುವ ಸಂದರ್ಭವೇ ಒದಗಿ ಬಂದಿರಲಿಲ್ಲ ಎನ್ನಲಾಗಿದೆ.
ಈ ಮಧ್ಯೆ ಶನಿವಾರ ಮುಹಮ್ಮದ್ ಅವರು ಕೆಲಸದ ನಿಮಿತ್ತ ಮತ್ತೊಮ್ಮೆ ಕೊಟ್ಟಿಗೆಹಾರಕ್ಕೆ ಬಂದಿದ್ದರು. ಆಗ ಅವರಿಗೆ ಅಂದಿನ ಹೋಟೆಲ್ ಬಿಲ್ ಬಾಕಿ ನೆನಪಾಗಿದೆ. ತಕ್ಷಣ ಅವರು ತಾನು 35 ವರ್ಷದ ಹಿಂದೆ ಊಟ ಮಾಡಿದ್ದ ಭಾರತ್ ಹೋಟೆಲ್ ಗೆ ಹೋಗಿದ್ದಾರೆ, ಈ ವೇಳೆ ಭಾರತ್ ಹೋಟೆಲ್ ನ ಮಾಲಕರ ಪುತ್ರ ಅಝೀಝ್ ಎಂಬವರು ಅಲ್ಲಿದ್ದರು. ಅವರನ್ನು ಭೇಟಿಯಾದ ಮುಹಮ್ಮದ್ ಅವರು 35 ವರ್ಷಗಳ ಹಿಂದಿನ ತನ್ನ ಊಟದ ಬಿಲ್ ಬಾಕಿ ವಿಚಾರವನ್ನು ಹೇಳಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ ಹಳೆಯ ಬಿಲ್ ಪಾವತಿ ಮಾಡಿದ್ದಲ್ಲದೇ, ಮತ್ತೇ ಅದೇ ಹೋಟೆಲ್ ನಲ್ಲಿ ಅಲ್ಲೇ ಊಟ ಮಾಡಿ ತೆರಳಿದ್ದಾರೆ.
ಮುಹಮ್ಮದ್ ಅವರ ಮುಗ್ದ ಪ್ರಾಮಾಣಿಕತೆ ವಿಚಾರ ಸ್ಥಳೀಯವಾಗಿ ಹರಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.