ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿಡುವು ನೀಡಿದ ಮಳೆ
ಭಾರೀ ಗಾಳಿಗೆ ಮರಗಳು ಧರಾಶಾಯಿ; ಕಾರಿನ ಮೇಲೆ ಮರ ಬಿದ್ದರೂ ಪ್ರಯಾಣಿಕರು ಪಾರು
ಚಿಕ್ಕಮಗಳೂರು: ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಅಬ್ಬರಿಸಿದ್ದ ಮಳೆ ಶನಿವಾರ ಹಾಗೂ ರವಿವಾರ ಬಿಡುವು ನೀಡಿದೆ. ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ನದಿ ತೀರದ ಗ್ರಾಮಗಳ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ಕಡಿಮೆಯಾಗಿದ್ದರೂ ಎರಡು ದಿನಗಳಿಂದ ಭಾರೀ ಗಾಳಿಯ ಆರ್ಭಟ ಆರಂಭವಾಗಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮಳೆ ಕಡಿಮೆಯಾಗಿದ್ದರೂ ಜಿಲ್ಲಾದ್ಯಂತ ಭಾರೀ ಗಾಳಿ ಬೀಸಲಾರಂಭಿಸಿದೆ. ಗಾಳಿಯ ಆರ್ಭಟಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ರವಿವಾರ ಸಂಜೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆ ಎಂಬಲ್ಲಿ ಭಾರೀ ಗಾತ್ರದ ಮರವೊಂದು ಶೃಂಗೇರಿ-ಚಿಕ್ಕಮಗಳೂರು ಹೆದ್ದಾರಿಗೆ ಉರುಳಿ ಬಿದ್ದಿದೆ. ಈ ವೇಳೆ ಕಾರೊಂದು ರಸ್ತೆಯಲ್ಲಿ ಹಾದು ಹೋಗುತ್ತಿದ್ದು, ಮರ ಕಾರಿನ ಮುಂಭಾಗಕ್ಕೆ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆ ಕಡಿಮೆಯಾಗಿದ್ದರೂ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿಗಳಿಗೆ ಭಾರೀ ಹಾನಿಯಾಗಿದೆ. ಕಳಸ-ಹೊರನಾಡು ಸಂಪರ್ಕ ಹೆಬ್ಬಾಳೆ ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಸೇತುವೆ ಶಿಥಿಲಗೊಂಡಿದೆ. ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳಲ್ಲಿ ಡಾಂಬಾರು ಕಿತ್ತು ಹೋಗಿದ್ದು, ರಸ್ತೆ ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ತುಂಬಿಕೊಂಡಿದ್ದು, ಜನ, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಉತ್ತಮೇಶ್ವರ ಗ್ರಾಮದಲ್ಲಿ ಸೇತುವೆಯೊಂದು ಕುಸಿಯುವ ಹಂತದಲ್ಲಿದ್ದು, ಸೇತುವೆ ಮೇಲೆ ಜನ, ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಜಯಪುರ ಪೊಲೀಸರು ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದ್ದಾರೆ.
ಇನ್ನು ಮಲೆನಾಡಿನ ಪ್ರಮುಖ ನದಿಗಳಾದ ಹೇಮಾವತಿ, ಭದ್ರಾ, ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರೂ ನೀರಿನ ಹರಿವಿನಲ್ಲಿ ಕೊಂಚ ಇಳಿಕೆಯಾಗಿದೆ. ನದಿ ಪಾತ್ರ ಹೊಲಗದ್ದೆ, ತೋಟಗಳಿಗೆ ಹರಿದಿದ್ದ ನೆರೆ ನೀರು ಇಳಿದಿದ್ದು, ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತಗೊಂಡು ರೈತರಿಗೆ ಅಪಾರ ಹಾನಿ ಸಂಭವಿಸಿದೆ. ಭಾರೀ ಮಳೆ ಹಾಗೂ ಗಾಳಿಗೆ ಮರಗಳು ಉರುಳಿ ಬಿದ್ದ ಪರಿಣಾಮ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಕಡಿತಗೊಂಡಿದೆ.