ಚಿಕ್ಕಮಗಳೂರು: ಮಲೆನಾಡಿನಲ್ಲಿ ಭಾರೀ ಮಳೆ; ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ, ಹೇಮಾವತಿ, ತುಂಗಾ ನದಿಗಳು
ಜಲಾವೃತಗೊಂಡ ಮನೆಗಳು, ಹಲವೆಡೆ ರಸ್ತೆ ಸಂಪರ್ಕ ಕಡಿತ
ಚಿಕ್ಕಮಗಳೂರು, ಜು.30: ಕಾಫಿನಾಡಿನಲ್ಲಿ ಕಳೆದ ಎರಡು ದಿನಗಳಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಸೋಮವಾರ ರಾತ್ರಿಯಿಂದ ಮತ್ತೆ ಸುರಿಯಲಾರಂಭಿಸಿದೆ. ಭಾರೀ ಮಳೆಯಿಂದಾಗಿ ಮಲೆನಾಡಿನ ಭದ್ರಾ, ಹೇಮಾವತಿ, ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ನದಿ ತೀರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭದ್ರಾ ನದಿಯಲ್ಲಿ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೋಡು, ಭೈರೇಗುಡ್ಡಾ ಗ್ರಾಮಗಳಿಗೆ ಭದ್ರಾ ನದಿ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆ ಕಾರಣಕ್ಕೆ ಮಲೆನಾಡು ಭಾಗದ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಾಳೆಹೊನ್ನೂರು-ಮಾಗುಂಡಿ-ಕೊಟ್ಟಿಗೆಹಾರ, ಕಳಸ-ಬಾಳೆಹೊನ್ನೂರು, ಸಂಪರ್ಕ ಕಡಿತಗೊಂಡಿದೆ. ಇನ್ನು ಬಾಳೆಹೊನ್ನೂರು ಪಟ್ಟಣ ಸಮೀಪದಲ್ಲಿ ಹರಿಯುವ ಭದ್ರಾ ನದಿಯ ಉಕ್ಕಿ ಹರಿಯುತ್ತಿದ್ದು, ಸಂತೆ ಮೈದಾನ ಜಲಾವೃತಗೊಂಡಿದೆ.
ಕಳಸ ಸಮೀಪದ ಜಾಂಬಳೆ ಎಂಬಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾದ ಪರಿಣಾಮ ಕಳಸ-ಕುದುರೆಮುಖ ರಸ್ತೆಯ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಕಳಸ ಪಟ್ಟಣ ಸಮೀಪದಲ್ಲಿರುವ ಕಳಸ-ಕಳಕೋಡು ಸಂಪರ್ಕದ ಕೋಟೆಹೊಳೆ ಸೇತುವೆಯೂ ಮುಳುಗುವ ಹಂತದಲ್ಲಿದ್ದು, ಈ ಸೇತುವೆ ಇದುವರೆಗೂ ಮುಳುಗಡೆಯಾಗಿರುವ ಇತಿಹಾಸವೇ ಇಲ್ಲ. ಆದರೆ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಭದ್ರಾ ನದಿಯಲ್ಲಿ ಭಾರೀ ನೀರು ಹರಿಯುತ್ತಿದ್ದು, ಸೇತುವೆ ಮುಳುಗುವ ಆತಂಕ ಎದುರಾಗಿದೆ. ಈ ಸೇತುವೆಯಿಂದ ಸ್ವಲ್ಪ ದೂರದಲ್ಲಿರುವ ಕೊಳಮಗ್ಗೆ ಎಂಬಲ್ಲಿ ಭದ್ರಾ ನದಿಯ ನೆರೆ ನೀರು ಕಳಸ-ಕಳಕೋಡು ರಸ್ತೆ ಮೇಲೆ ಹರಿಯುತ್ತಿರುವುದರಿಂದ ಸಂಪರ್ಕ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಹಳುವಳ್ಳಿ ಮೂಲಕ ಹೊರನಾಡು ಸಂಪರ್ಕದ ರಸ್ತೆ ಮೇಲೆ ಬೃಹತ್ ಮರ ಉರುಳಿದ ಪರಿಣಾಮ ಈ ರಸ್ತೆಯಲ್ಲೂ ಸಂಪರ್ಕ ಕಡಿತಗೊಂಡಿದೆ. ಕಳಸ-ಹೊರನಾಡು-ಶೃಂಗೇರಿ ಸಂಪರ್ಕ ರಸ್ತೆಯಲ್ಲಿರುವ ಅಬ್ಬಿಕಲ್ಲು ಎಂಬಲ್ಲಿ ಕಳಸ-ಅಬ್ಬಿಕಲ್ಲು ಸಂಪರ್ಕ ರಸ್ತೆ ಬಳಿ ಭೂಕುಸಿತ ಉಂಟಾಗಿದ್ದು, ಮಳೆ ಮುಂದುವರಿದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿಯುವ ಆತಂಕ ಎದುರಾಗಿದೆ.
ತುಂಗಾನದಿ ಕೂಡ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದ್ದು, ಶೃಂಗೇರಿ, ನೆಮ್ಮಾರು ಗ್ರಾಮಗಳಲ್ಲಿ ನದಿಯ ನೆರೆ ನೀರು ಅಕ್ಕಪಕ್ಕದ ಹೊಲ ಗದ್ದೆ, ರಸ್ತೆಗಳ ಮೇಲೆ ಹರಿಯಲಾರಂಭಿಸಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಪ್ಯಾರಲಲ್ ರಸ್ತೆ ಜಲಾವೃತಗೊಂಡಿದೆ. ಹೇಮಾವತಿ ನದಿಯಲ್ಲೂ ಪ್ರವಾಹ ಉಂಟಾಗಿದ್ದು, ಅಕ್ಕಪಕ್ಕದ ಕಾಫಿ, ಅಡಿಕೆ ತೋಟಗಳು, ಶುಂಠಿ ಗದ್ದೆಗಳೂ ಜಲಾವೃತಗೊಂಡಿವೆ.
ಚಾರ್ಮಾಡಿ ಘಾಟ್‌ನ 9ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿ ಮಂಗಳವಾರ ಬೆಳಗ್ಗೆ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಮಣ್ಣು, ಮರಗಳನ್ನು ತೆರವು ಮಾಡಲಾಗಿದ್ದು, ವಾಹನ ಸಂಚಾರ ಪುನಾರಂಭಗೊಂಡಿದೆ. ಘಾಟಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಲಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆವಹಿಸಲು ಸೂಚಿಸಲಾಗಿದೆ.
ಕೊಪ್ಪ ತಾಲೂಕಿನ ಹುಲ್ಲಿನ ಗದ್ದೆ ಎಂಬಲ್ಲಿರುವ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ಕೊಗ್ರೆ-ಜಯಪುರ-ಶೃಂಗೇರಿ ಸಂಪರ್ಕ ಕಡಿತಗೊಂಡಿದೆ. ನೇಡಂಗಿ ಎಂಬಲ್ಲಿ ರಾತ್ರಿ ಧರೆ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದಿರುವ ಪರಿಣಾಮ ಶೃಂಗೇರಿ, ಮೆಣಸಿನ ಹಾಡ್ಯ-ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಕಳಸ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಿರೆಬೈಲ್'ನಿಂದ ಚೆನ್ನಹಡ್ಲು ಮಲ್ಲೇಶನಗುಡ್ಡ ಮಾರ್ಗವಾಗಿ ಬಾಳೆಹೊಳೆ ಹೋಗುವ ರಸ್ತೆಯಲ್ಲಿ ಭೂ ಕುಸಿತ ಸಂಭವಿಸಿದ್ದು ಸಾರ್ವಜನಿಕರು ಈ ಮಾರ್ಗವಾಗಿ ಸಂಚರಿಸಬಾರದು ಎಂದು ಕಳಸ ಪೋಲಿಸ್ ಠಾಣಾ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.