ಚಿಕ್ಕಮಗಳೂರು: ಭಾರೀ ಮಳೆಗೆ ಜಿಲ್ಲಾದ್ಯಂತ 39 ಶಾಲಾ ಕಟ್ಟಡಗಳಿಗೆ ಹಾನಿ; ಅಪಾರ ನಷ್ಟ
ಚಿಕ್ಕಮಗಳೂರು: ಕಳೆದೊಂದು ತಿಂಗಳಿನಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕ ಆಸ್ತಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟಕ್ಕೂ ಕಾರಣವಾಗಿದೆ. ಭಾರೀ ಮಳೆ ಜಿಲ್ಲಾದ್ಯಂತ ಇರುವ ಅನೇಕ ಸರಕಾರಿ ಶಾಲೆಗಳಿಗೂ ಹಾನಿಯನ್ನುಂಟು ಮಾಡಿದೆ. 2023ನೇ ಸಾಲಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲಾದ್ಯಂತ 15 ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದರೇ, ಜೂ.1ರಿಂದ ಜು.27ರವರೆಗೆ ಸುರಿದ ಭಾರೀ ಮಳೆಗೆ ಜಿಲ್ಲಾದ್ಯಂತ 24 ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿ 39 ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದ 81 ಲಕ್ಷ ರೂ. ನಷ್ಟ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ.
2023ನೇ ಸಾಲಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ ಚಿಕ್ಕಮಗಳೂರು ತಾಲೂಕಿನ 1 ಶಾಲೆಯ ಕಟ್ಟಡಕ್ಕೆ ಹಾನಿಯಾಗಿದ್ದರೆ, ಶೃಂಗೇರಿ ತಾಲೂಕಿನಲ್ಲಿ 6 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 7 ಶಾಲಾ ಕಟ್ಟಡಗಳು ಹಾಗೂ ಕೊಪ್ಪ ತಾಲೂಕಿನ 1 ಶಾಲಾ ಕಟ್ಟಡ ಸೇರಿದಂತೆ ಒಟ್ಟು 15 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದೆ. ಜೂ.1ರಿಂದ ಜು.27ರವರೆಗೆ ಜಿಲ್ಲಾದ್ಯಂತ 24 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 5, ಮೂಡಿಗೆರೆ ತಾಲೂಕಿನಲ್ಲಿ 6, ಶೃಂಗೇರಿ 7, ಕೊಪ್ಪ 3, ಅಜ್ಜಂಪುರ ತಾಲೂಕಿನಲ್ಲಿ 1 ಪ್ರಾಥಮಿಕ ಶಾಲೆಯ ಕಟ್ಟಡಗಳಿಗೆ ಹಾನಿಯಾಗಿದೆ. ಈ ಸಾಲಿನಲ್ಲಿ ಜಿಲ್ಲಾದ್ಯಂತ ಒಟ್ಟು 39 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಆವತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಸಗಲಿ ಶಾಲೆಯಲ್ಲಿ 7 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2 ಕೊಠಡಿಗಳಿಗೆ ಹಾನಿಯಾಗಿದೆ. ಶೃಂಗೇರಿ ತಾಲೂಕಿನ ವೈಕುಂಠಪುರ ಶಾಲೆಯಲ್ಲಿ 10 ಮಕ್ಕಳಿದ್ದು, 2 ಕೊಠಡಿಗಳಿಗೆ ಹಾನಿಯಾಗಿದೆ. ತಾಲೂಕಿನ ಗಿಣಿಕಲ್ ಶಾಲೆಯಲ್ಲಿ 18 ಮಕ್ಕಳಿದ್ದು, 1 ಕೊಠಡಿಗೆ ಹಾನಿಯಾಗಿದೆ, ಬೆಳಂದೂರು ಗ್ರಾಮದ ಆನೆಗುಂದಿ ಶಾಲೆಯಲ್ಲಿ 20 ಮಕ್ಕಳಿದ್ದು, 3 ಕೊಠಡಿಗಳಿಗೆ ಹಾನಿಯಾಗಿದೆ. ಯಡದಾಳು ಗ್ರಾಮದಲ್ಲಿರುವ ಶಾಲೆಯಲ್ಲಿ 11 ಮಕ್ಕಳಿದ್ದು, 3 ಕೊಠಡಿಗಳಿಗೆ ಹಾನಿಯಾಗಿದೆ. ಕುಂಚೇಬೈಲು ಶಾಲೆಯಲ್ಲಿ 23 ಮಕ್ಕಳಿದ್ದು, 2 ಕೊಠಡಿಗಳಿಗೆ ಹಾನಿಯಾಗಿದೆ. ಶೃಂಗೇರಿ ಪಟ್ಟಣದ ವಾರ್ಡ್ 8ರಲ್ಲಿನ ಶಾಲೆಯಲ್ಲಿ 49 ಮಕ್ಕಳಿದ್ದು, 3 ಕೊಠಡಿಗಳಿಗೆ ಹಾನಿಯಾಗಿದೆ.
ಮೂಡಿಗೆರೆ ತಾಲೂಕಿನ ಹೊರನಾಡು ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ 52 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯ 1 ಕೊಠಡಿಗೆ ಹಾನಿಯಾಗಿದೆ. ಮೂಡಿಗೆರೆ ಪಟ್ಟಣದ ಶಾಲೆಯಲ್ಲಿ 27 ಮಕ್ಕಳಿದ್ದು, 1 ಕೊಠಡಿಗೆ ಹಾನಿಯಾಗಿದೆ. ತಾಲೂಕಿನ ಬಣಕಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 136 ಮಕ್ಕಳಿದ್ದು, 1 ಕೊಠಡಿ ಮಳೆಯಿಂದ ಹಾನಿಯಾಗಿದೆ. ಕನ್ನಾಪುರ ಶಾಲೆಯಲ್ಲಿ 23 ಮಕ್ಕಳಿದ್ದು, 2 ಕೊಠಡಿಗಳಿಗೆ ಹಾನಿಯಾಗಿದೆ. ಫಲ್ಗುಣಿ ಶಾಲೆಯಲ್ಲಿ 31 ಮಕ್ಕಳಿದ್ದು, 1 ಕೊಠಡಿಗೆ ಹಾನಿಯಾಗಿದೆ. ಹೇರಡಿಕೆ ಗ್ರಾಮದ ಶಾಲೆಯಲ್ಲಿ 18 ಮಕ್ಕಳಿದ್ದು, 1 ಕೊಠಡಿಗೆ ಹಾನಿಯಾಗಿದೆ. ಬಾಳೆಹೊಳೆ ಗ್ರಾಮದ ಶಾಲೆಯಲ್ಲಿ 50 ಮಕ್ಕಳಿದ್ದು, 1 ಕೊಠಡಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನ ಬೊಬ್ಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ 69 ವಿದ್ಯಾರ್ಥಿಗಳಿದ್ದು, 1 ಕೊಠಡಿಗೆ ಹಾನಿಯಾಗಿದೆ.