ಚಿಕ್ಕಮಗಳೂರು: ಶಿಕ್ಷಕಿ ಸೇರಿ ಇಬ್ಬರಲ್ಲಿ ಮಂಗನಕಾಯಿಲೆ ಪತ್ತೆ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಬ್ಬರಲ್ಲಿ ಮಂಗನ ಕಾಯಿಲೆ (ಕೆಎಫ್‍ಡಿ) ಕಾಣಿಸಿಕೊಂಡಿದೆ. ಶೃಂಗೇರಿ ತಾಲೂಕಿನ 79 ವರ್ಷದ ವ್ಯಕ್ತಿಯೊಬ್ಬರಲ್ಲಿ ಕಳೆದ ಸೋಮವಾರ ಸೋಂಕು ಕಾಣಿಸಿಕೊಂಡಿದ್ದರೆ, ಬುಧವಾರ ಕೊಪ್ಪ ತಾಲೂಕಿನ 35ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಪ್ಪ ತಾಲೂಕು ಭತ್ರಹಳ್ಳಿ ಜೋಗಿಸರದ 35ವರ್ಷದ ಖಾಸಗಿ ಶಾಲಾ ಶಿಕ್ಷಕಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಚಿಕ್ಕಮಗಳೂರು ನಗರದಲ್ಲಿ ತರಬೇತಿಗೆ ಬಂದು ಹೋಗಿದ್ದನ್ನು ಹೊರತುಪಡಿಸಿದರೇ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮದಲ್ಲಿನ ಪ್ರಾಣಿಗಳಲ್ಲಿನ ಉಣ್ಣೆಯಿಂದ ಸೋಂಕು ಬಂದಿರಬಹುದೆಂದು ಅಂದಾಜಿಸಲಾಗಿದೆ.
ಶಾಲಾ ಶಿಕ್ಷಕಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಶಿಕ್ಷಕಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ. ಕೊಪ್ಪ ತಾಲೂಕಿನಲ್ಲಿ ಕಳೆದ ವರ್ಷ ಮೂರು ಮಂಗನ ಕಾಯಿಲೆ ಪ್ರಕರಣಗಳು ಕಾಣಿಸಿಕೊಂಡಿತ್ತು. 2024ರಲ್ಲಿ ಇದೇ ಮೊದಲ ಬಾರಿಗೆ ಇಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡಿದೆ.
ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಂಬಂಧಿಸಿದ ಗ್ರಾಮಗಳ ವ್ಯಾಪ್ತಿಯಲ್ಲಿ ಉಣ್ಣೇಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.