ಚಿಕ್ಕಮಗಳೂರು: ಮಸೀದಿ ಸಮೀಪ ಬಂಟಿಂಗ್ಸ್ ಕಟ್ಟಲು ವಿರೋಧ
ಸಂಘ ಪರಿವಾರದವರ ಜೊತೆ ಸ್ಥಳೀಯರ ಮಾತಿನ ಚಕಮಕಿ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆಯಲ್ಲಿ ಸಂಘಪರಿವಾರದ ಸದಸ್ಯರು ಮಸೀದಿ ಆವರಣದಲ್ಲಿ ಕೇಸರಿ ಬಂಟಿಂಗ್ಸ್ ಕಟ್ಟಲು ಮುಂದಾದಾಗ, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಹೊತ್ತು ಸಂಘ ಪರಿವಾರ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಗುರುವಾರ ರಾತ್ರಿ ಕೆಲ ಸಂಘಪರಿವಾರದ ಸದಸ್ಯರು ಆಲ್ದೂರು-ಹಾಂದಿ ಸಂಪರ್ಕ ರಸ್ತೆಯಲ್ಲಿರುವ ಮಸೀದಿ ಸಮೀಪದಲ್ಲಿ ಕೇಸರಿ ಬಂಟಿಂಗ್ಸ್ಗಳನ್ನು ಕಟ್ಟಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ಮುಖಂಡರು ಮಸೀದಿ ಸಮೀಪದಲ್ಲಿ ಬಂಟಿಂಗ್ಸ್ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿ, ಮಸೀದಿಯಿಂದ ನಿರ್ದಿಷ್ಟ ದೂರದಲ್ಲಿ ಬಂಟಿಂಗ್ಸ್, ಬ್ಯಾನರ್ ಕಟ್ಟಬೇಕೆಂದು ನಿಯಮವೇ ಇದೆ. ನಿಯಮದ ಪ್ರಕಾರ ಬಂಟಿಂಗ್ಸ್ ಕಟ್ಟಬೇಕು, ಮಸೀದಿ ಸಮೀಪದಲ್ಲಿ ಬಂಟಿಂಗ್ಸ್ ಕಟ್ಟಬೇಡಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಸ್ಥಳೀಯರ ವಿರೋಧದ ನಡುವೆಯೂ ಸಂಘಪರಿವಾರದ ಸದಸ್ಯರು ಪೊಲೀಸ್ ಇಲಾಖೆಯ ಅನುಮತಿ ಇದೆ ಎಂದು ಹೇಳಿ ಮಸೀದಿ ಸಮೀಪದಲ್ಲಿ ಬಂಟಿಂಗ್ಸ್ ಕಟ್ಟಲು ಮುಂದಾಗಿದ್ದರಿಂದ ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಈ ವೇಳೆ ಸಂಘ ಪರಿವಾರದವರ ಜೊತೆ ಸ್ಥಳೀಯರ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳೀಯ ಮುಖಂಡರು ಹಾಗೂ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ಪರಿಸ್ಥಿತಿ ತಿಳಿಗೊಂಡಿದೆ.
ಈ ಘಟನೆ ಸಂಬಂಧ ಸಂಘಪರಿವಾರದ ಸದಸ್ಯರು ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಬಂಟಿಂಗ್ಸ್ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದು, ಈ ಆರೋಪ ಸತ್ಯಕ್ಕೆ ದೂರವಾದ ಸಂಗತಿ. ಸ್ಥಳದಲ್ಲಿ ಮಾತಿನ ಚಕಮಕಿ ಮಾತ್ರ ನಡೆದಿದೆ. ನಂತರ ಪರಿಸ್ಥಿತಿ ಶಾಂತವಾಗಿದೆ. ಸುಳ್ಳು ಸುದ್ದಿ ಹರಡಿ ಗೊಂದಲ ಮೂಡಿಸುವ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ಮಸೀದಿ ಸಮೀಪದಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟಲು ಅವಕಾಶವಿಲ್ಲ. ಮಸೀದಿಯಿಂದ ನಿರ್ದಿಷ್ಟ ಅಂತರ ಕಾಯ್ದುಕೊಂಡು ಬಂಟಿಂಗ್ಸ್ ಕಟ್ಟಬೇಕೆಂಬ ನಿಯಮವಿದೆ. ಆದರೆ ಗುರುವಾರ ರಾತ್ರಿ ಈ ನಿಯಮ ಮೀರಿ ಬಂಟಿಂಗ್ಸ್ ಕಟ್ಟಲು ಮುಂದಾಗಿದ್ದರಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆಯಷ್ಟೆ, ಯಾರ ಮೇಲೂ ಹಲ್ಲೆ ನಡೆದಿಲ್ಲ. ಸಂಘ ಪರಿವಾರದವರ ಮೇಲೆ ಹಲ್ಲೆ ಮಾಡಿದ್ದಾರೆಂದು ಕೆಲ ದೃಶ್ಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.
- ಅಶ್ರಫ್, ಸ್ಥಳೀಯ ಮುಖಂಡರು
ಮಸೀದಿ ಸಮೀಪದಲ್ಲಿ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ಎರಡು ಸಮುದಾಯದವರ ನಡುವೆ ಗಲಾಟೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆಯೇ ಹೊರತು ಈ ಸಂಬಂಧ ಯಾವುದೇ ದೂರು ಬಂದಿಲ್ಲ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಬಿಗುವಿನ ವಾತಾವರಣವೂ ಇಲ್ಲ. ಮುಂಜಾಗ್ರತಾ ಕ್ರಮವಹಿಸಲಾಗಿದೆ.
- ಅಕ್ಷತಾ, ಆಲ್ದೂರು ಪೊಲೀಸ್ ಠಾಣಾಧಿಕಾರಿ
ಹಾಂದಿ ಸಮೀಪದ ಮಸೀದಿ ಬಳಿ ಬಂಟಿಂಗ್ಸ್ ಕಟ್ಟುವ ವಿಚಾರಕ್ಕೆ ಗುರುವಾರ ರಾತ್ರಿ ಎರಡು ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದಿದೆಯೇ ಹೊರತು ಯಾವುದೇ ಗಲಾಟೆ ನಡೆದಿಲ್ಲ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ.
- ಡಾ.ವಿಕ್ರಮ್ ಅಮಟೆ, ಎಸ್ಪಿ