ಚಿಕ್ಕಮಗಳೂರು:ʼಶೂ ಹಾಕಿದರೆ ಮೈಲಿಗೆಯಾಗುತ್ತೆʼ ಎಂದು ಬರಿಗಾಲಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು!
►ಗೊಲ್ಲರಹಟ್ಟಿ ನಿವಾಸಿಗಳಿಂದ ಮತ್ತೊಂದು ಅಮಾನವೀಯ ಪದ್ಧತಿ ಆಚರಣೆ ►ಆರೋಪ ತಳ್ಳಿ ಹಾಕಿದ ನಿವಾಸಿಗಳು, ಶಾಲಾ ಶಿಕ್ಷಕರು, ಬಿಇಒ
ಸಾಂದರ್ಭಿಕ ಚಿತ್ರ Photo: PTI
ಚಿಕ್ಕಮಗಳೂರು: ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿ ಬಡಾವಣೆಗೆ ದಲಿತ ಯುವಕ ಕೆಲಸಕ್ಕೆ ಹೋಗಿದ್ದನ್ನೇ ನೆಪ ಮಾಡಿಕೊಂಡು ಬಡಾವಣೆ ಮೈಲಿಗೆಯಾಗಿದೆ ಎಂದು ಅರೋಪಿಸಿ ಹಲ್ಲೆ ಮಾಡಿದ್ದಲ್ಲದೆ, ಆತನಿಂದ ದಂಡ ರೂಪದಲ್ಲಿ ಹಣ ವಸೂಲಿ ಮಾಡಿದ ಘಟನೆ ಬೆನ್ನಲ್ಲೇ ಈ ಬಡಾವಣೆ ನಿವಾಸಿಗಳು ಮತ್ತೊಂದು ಅಮಾನವೀಯ ಮೌಢ್ಯಾಚರಣೆ ನಡೆಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ.
ಗೊಲ್ಲರಹಟ್ಟಿ ಬಡಾವಣೆಯ ನಿವಾಸಿಗಳು ಮೈಲಿಗೆ ಕಾರಣಕ್ಕೆ ಶಾಲೆಗೆ ಹೋಗುವ ತಮ್ಮ ಮಕ್ಕಳ ಕಾಲಿಗೆ ಚಪ್ಪಲಿ, ಶೂಗಳನ್ನು ಧರಿಸಲು ಬಿಡುತ್ತಿಲ್ಲ. ಇದರಿಂದ ಬಡಾವಣೆಯಲ್ಲಿರುವ ಶಾಲಾ ಮಕ್ಕಳು ಸರಕಾರ ನೀಡಿರುವ ಶೂಗಳನ್ನೂ ಧರಿಸದೇ ಶಾಲೆಗೆ ಹೋಗುತ್ತಿದ್ದಾರೆ.
ಚಪ್ಪಲಿ ಅಥವಾ ಶೂಗಳನ್ನು ಧರಿಸಿದರೇ ಗ್ರಾಮದಲ್ಲಿರುವ ದೇವರು ಹಾಗೂ ಬಡಾವಣೆ ಮೈಲಿಗೆಯಾಗುತ್ತದೆ. ಮೈಲಿಗೆಯಾದಲ್ಲಿ ಅದರ ದೋಷ ಪರಿಹಾರಕ್ಕೆ ಹಣ ಖರ್ಚು ಮಾಡಬೇಕು. ಹಣ ಖರ್ಚು ಮಾಡಬೇಕಾದ ಕಾರಣಕ್ಕೆ ಶಾಲಾ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಶೂ ಹಾಕಲು ಬಿಡದೇ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಗ್ರಾಮದ ಅಕ್ಕಪಕ್ಕದ ನಿವಾಸಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಈ ಘಟನೆ ಸಂಬಂಧ ವಾರ್ತಾಭಾರತಿ ಸೇರಿದಂತೆ ಕೆಲ ಖಾಸಗಿ ಮಾಧ್ಯಮಗಳು ವಾಸ್ತವಾಂಶ ತಿಳಿಯುವ ನಿಟ್ಟಿನಲ್ಲಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಈ ಆರೋಪ ಸಂಬಂಧ ಶಾಲೆಯ ಶಿಕ್ಷಕರು ವ್ಯತಿರಿಕ್ತ ಹೇಳಿಕೆ ನೀಡಿದ್ದು, ತರೀಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ ಈ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿಕೆ ನೀಡಿದ್ದಾರೆ.
ಗೇರುಮರಡಿ ಶಾಲೆಯಲ್ಲಿ ಗೊಲ್ಲ ಸಮುದಾಯದ ಹಾಗೂ ಬೋವಿ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಎರಡೂ ಸಮುದಾಯಗಳ ಮಕ್ಕಳು ಯಾವುದೇ ಜಾತಿಬೇಧವಿಲ್ಲದೇ ಶಾಲೆಗೆ ಬರುತ್ತಿದ್ದಾರೆ. ಮಕ್ಕಳಿಗೆ ಸರಕಾರದಿಂದ ಶೂಗಳನ್ನು ವಿತರಿಸಿದ್ದು, ಈ ಶೂಗಳನ್ನು ವಾರದಲ್ಲಿ 5 ದಿನ ಧರಿಸಿ ಬರುತ್ತಿದ್ದಾರೆ. ಒಂದು ದಿನ ಮಾತ್ರ ಮಕ್ಕಳಿಗೆ ಸಮವಸ್ತ್ರ ಇಲ್ಲದ ಕಾರಣಕ್ಕೆ ಮಕ್ಕಳು ಚಪ್ಪಲಿ ಧರಿಸಿ ಬರುತ್ತಾರೆ. ಈ ಶಾಲೆಯಲ್ಲಿ ಬರೀಗಾಲಿನಲ್ಲಿ ಬರುವ ಯಾವ ಮಕ್ಕಳೂ ಇಲ್ಲ, ಶಾಲೆಯಲ್ಲಿ ಶಿಕ್ಷಕರೂ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಶಾಲೆಯ ಶಿಕ್ಷಕರು ಮತ್ತು ಬಿಇಒ ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ.
ಈ ಆರೋಪ ಸಂಬಂಧ ದಲಿತ ಸಂಘಟನೆಗಳ ಮುಖಂಡರನ್ನು ‘ವಾರ್ತಾಭಾರತಿ’ ಮಾತನಾಡಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ತರೀಕೆರೆ ತಾಲೂಕು ಮಾದಿಗ ಮಹಾಸಭಾ ಅಧ್ಯಕ್ಷ ಸುನಿಲ್, ‘‘ಗ್ರಾಮದಲ್ಲಿ ಅಸ್ಪಶ್ಯತೆ ಆಚರಣೆ ಇಂದಿಗೂ ಇದೆ. ಜ.೧ರಂದು ಗ್ರಾಮದೊಳಗೆ ಕೆಲಸಕ್ಕೆ ಬಂದಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ದಂಡ ಕಟ್ಟಿಸಿಕೊಂಡಿರುವುದೇ ಸಾಕ್ಷಿ. ಗೊಲ್ಲರಹಟ್ಟಿಯಲ್ಲಿ ವ್ಯಾಪಕ ಅಸ್ಪಶ್ಯತೆಯಂತಹ ಮೌಢ್ಯಾಚರಣೆ ವ್ಯಾಪಕವಾಗಿದ್ದು, ತಮ್ಮ ಶಾಲಾ ಮಕ್ಕಳಿಗೆ ಶೂ, ಚಪ್ಪಲಿ ಹಾಕಿಸಿದರೆ ಮೈಲಿಗೆಯಾಗುತ್ತದೆ. ಮೈಲಿಗೆ ದೋಷ ಪರಿಹಾರಕ್ಕೆ ಪೂಜೆ ಮಾಡಿಸಲು ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೆ ಶಾಲಾ ಮಕ್ಕಳಿಗೂ ಶೂ ಧರಿಸಲು ಬಿಡುತ್ತಿಲ್ಲ. ಈ ಬಗ್ಗೆ ಈ ಬಡಾವಣೆಯ ಮಹಿಳೆಯರೇ ಹೇಳಿಕೆ ನೀಡಿದ್ದಾರೆ’’ ಎಂದು ತಿಳಿಸಿದ್ದಾರೆ.
ಗೊಲ್ಲರಹಟ್ಟಿಯಲ್ಲಿ ಅಸ್ಪಶ್ಯತೆ ಇನ್ನೂ ಜೀವಂತವಾಗಿದೆ. ವಕ್ಕಳು ಶೂ, ಚಪ್ಪಲಿ ಧರಿಸಿದರೆ ಮೈಲಿಗೆ ಆಗುತ್ತದೆ ಎಂಬ ಕಾರಣಕ್ಕೆ ಬರಿಗಾಲಿನಲ್ಲಿ ಶಾಲೆಗೆ ಕಳಹಿಸಲಾಗುತ್ತಿದೆ. ಈ ವಿಚಾರ ಮಾಧ್ಯಮಗಳಲ್ಲಿ ಬಂದ ಕಾರಣಕ್ಕೆ ಈ ಮೌಢ್ಯಾಚರಣೆಯನ್ನು ಶಾಲೆಯ ಶಿಕ್ಷಕರು, ಬಡಾವಣೆ ನಿವಾಸಿಗಳು ಮುಚ್ಚಿಡುತ್ತಿದ್ದಾರೆ.
-ಓಂಕಾರಪ್ಪ, ಮಾನವ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ
ಮಕ್ಕಳು ಬರಿಗಾಲಿನಲ್ಲಿ ಶಾಲೆಗೆ ಬರುತ್ತಾರೆಂಬುದು ಸುಳ್ಳು. ಎಲ್ಲ ಮಕ್ಕಳಿಗೂ ಸರಕಾರದ ಶೂ ವಿತರಿಸಲಾಗಿದೆ. ವಾರದಲ್ಲಿ ೫ ದಿನವೂ ಶೂ ಧರಿಸಿ ಶಾಲೆಗೆ ಬರುತ್ತಿದ್ದಾರೆ. ಶಾಲೆಯಲ್ಲಿ ಗೊಲ್ಲ ಹಾಗೂ ಭೋವಿ ಸಮುದಾಯದ ಮಕ್ಕಳು ಜಾತಿ ಭೇದವಿಲ್ಲದೆ ಕಲಿಯುತ್ತಿದ್ದಾರೆ. ಶಾಲೆಯ ಮಕ್ಕಳು ಚಪ್ಪಲಿಯನ್ನೂ ಹಾಕುತ್ತಾರೆ, ಶೂ ಕೂಡ ಹಾಕುತ್ತಾರೆ. ಶಾಲೆಯ ಆವರಣದಲ್ಲಿ ಚಪ್ಪಲಿ, ಶೂ ಹಾಕಬಾರದು ಎಂಬ ನಿಯಮವೇ ಇಲ್ಲ. ಊರಿನಲ್ಲಿ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ, ಶಾಲೆಯಲ್ಲಿ ಮಾತ್ರ ಯಾವ ಸಮಸ್ಯೆಯೂ ಇಲ್ಲ. ಮಕ್ಕಳು ಮರೆತು ಚಪ್ಪಲಿ ಹಾಕದೆ ಬಂದ ದಿನದಲ್ಲೂ ಶಿಕ್ಷಕರು ಚಪ್ಪಲಿ ಹಾಕಿ ಬರುವಂತೆ ಹೇಳಿ ಕಳುಹಿಸುತ್ತಿದ್ದೇವೆ.
-ಆಂಜನೇಯ, ಸಿ.ಎಲ್., ಶಾಲೆಯ ಶಿಕ್ಷಕ
ಶಾಲಾ ಮಕ್ಕಳು ಬರಿಗಾಲಿನಲ್ಲಿ ಶಾಲೆಗೆ ಬರುತ್ತಾರೆಂಬ ಸುದ್ದಿ ಕೇಳಿ ಆಶ್ಚರ್ಯವಾಯಿತು. ಕೂಡಲೇ ಶನಿವಾರ ಶಾಲೆಗೆ ಬಂದು ಪರಿಶೀಲನೆ ನಡೆಸಿದ್ದೇನೆ. ಎಲ್ಲ ಮಕ್ಕಳೂ ಚಪ್ಪಲಿ ಹಾಕಿಕೊಂಡು ಶಾಲೆಗೆ ಬಂದಿದ್ದರು. ೬ ಮಕ್ಕಳು ಚಪ್ಪಲಿ ಹರಿದಿದ್ದರಿಂದ ಬರಿಗಾಲಿನಲ್ಲಿ ಬಂದಿದ್ದಾರೆ. ವಾರದ ೫ ದಿನವೂ ಮಕ್ಕಳು ಸರಕಾರ ನೀಡಿರುವ ಶೂ ಧರಿಸಿ ಶಾಲೆಗೆ ಬರುತ್ತಿದ್ದಾರೆ. ಶನಿವಾರ ಸಮವಸ್ತ್ರ ಇಲ್ಲದ ಕಾರಣಕ್ಕೆ ಮಕ್ಕಳು ಚಪ್ಪಲಿ ಹಾಕಿ ಬಂದಿದ್ದಾರೆ. ೬ ಮಕ್ಕಳೂ ಸೋಮವಾರ ಬಂದು ನೋಡಿ ಶೂ ಧರಿಸಿಯೇ ಬರುತ್ತೀವಿ ಎಂದು ನನ್ನ ಬಳಿ ಹೇಳಿದ್ದಾರೆ. ಈ ಆರೋಪ ಸಂಬಂಧ ನಾನು ಪ್ರತಿದಿನ ಪರಿಶೀಲನೆ ನಡೆಸುತ್ತೇನೆ. ಬರಿಗಾಲಿನಲ್ಲಿ ಬರುವ ಮಕ್ಕಳಿದ್ದರೆ ಅವರಿಗೆ ತಿಳುವಳಿಕೆ ನೀಡಲಾಗುವುದು.
-ಗೋವಿಂದಪ್ಪ, ಬಿಇಒ, ತರೀಕೆರೆ