ಚಿಕ್ಕಮಗಳೂರು | ಆಟವಾಡುತ್ತಿದ್ದ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಮೃತ್ಯು
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮನೆಯಂಗಳದಲ್ಲಿ ಆಟ ಆಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಧ್ಯಪ್ರದೇಶದ ನಝೀರಾಬಾದ್ ನಿವಾಸಿಗಳಾದ ಸುನೀತಾ ಮತ್ತು ಅರ್ಜುನ್ ಸಿಂಗ್ ದಂಪತಿಯ ಪುತ್ರಿಯರಾದ ಸೀಮಾ (6) ಮತ್ತು ರಾಧಿಕಾ (2) ಮೃತಪಟ್ಟ ಮಕ್ಕಳು.
ಅರ್ಜುನ್ ಸಿಂಗ್ ನಝೀರಾಬಾದ್ ನಲ್ಲೇ ವಾಸವಿದ್ದು, ಮೂವರು ಮಕ್ಕಳೊಂದಿಗೆ ಸುನೀತಾ ಬಾಯಿ ಕೂಲಿ ಕೆಲಸ ಅರಸಿ ಬಂದವರು ಕೊಪ್ಪದಲ್ಲಿ ಎಸ್ಟೇಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಗಾಗಿ ನಿರ್ಮಿಸಿರುವ ಲೈನ್ ಮನೆಯಲ್ಲಿ ವಾಸವಿದ್ದರು. ಸುನೀತಾ ತನ್ನ 13 ವರ್ಷದ ಹಿರಿಯ ಪುತ್ರ ಬೀರ್ಸಿಂಗ್ ಜೊತೆ ಮಂಗಳವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ವಾಪಸ್ಸಾದಾಗ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು.
ಬಳಿಕ ಇತರ ಕಾರ್ಮಿಕರ ಜೊತೆಗೂಡಿ ಹುಡುಕಾಡಿದಾಗ 8 ಗಂಟೆ ವೇಳೆ ಮನೆಯಿಂದ 100 ಮೀಟರ್ ದೂರದಲ್ಲಿರುವ ಬಾವಿಯೊಂದರಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು.
ಈ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.