ಚಿಕ್ಕಮಗಳೂರು: ಜೈಲು ಸೇರಿದ 4ನೇ ದಿನದಲ್ಲಿ ವಿಚಾರಣಾಧೀನ ಕೈದಿ ಮೃತ್ಯು
ಮೃತದೇಹದಲ್ಲಿ ಗಾಯದ ಗುರುತು ಪತ್ತೆ: ಕುಟುಂಬಸ್ಥರ ಆರೋಪ
ಚಿಕ್ಕಮಗಳೂರು, ಫೆ.28: ನಾಲ್ಕು ದಿನಗಳ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೋರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಸತೀಶ್ ಮೃತಪಟ್ಟವರು. ಮೂಲತಃ ಚಿಕ್ಕಮಗಳೂರಿನವನಾಗಿದ್ದ ಸತೀಶ್ ಹಾಗೂ ಆತನ ಅಣ್ಣ ಸಿದ್ದರಾಜು ಮಧ್ಯೆ ಏಳು ವರ್ಷಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ಚಿಕ್ಕಮಗಳೂರಿನ ದಂಟರಮಕ್ಕಿ ಬಳಿ ಹೊಡೆದಾಟ ನಡೆದಿತ್ತು. ಈ ವಿಚಾರವಾಗಿ ಸತೀಶ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಆತ ತಲೆಮರೆಸಿಕೊಂಡಿದ್ದನು. ನಾಲ್ಕು ದಿನಗಳ ಹಿಂದೆ ಸತೀಶ್ ಹಾಸನದ ಶ್ರೀನಗರದಲ್ಲಿ ವಾಸವಿರುವುದನ್ನು ಪತ್ತೆ ಹಚ್ಚಿದ ನಗರ ಠಾಣೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ನಡುವೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸತೀಶ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸತೀಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಆತನ ಪತ್ನಿ ನೇತ್ರಾ, ಕಾರಾಗೃಹ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತೀಶ್ ಕೈ, ಕುತ್ತಿಗೆ ಹಾಗೂ ದೇಹದ ಭಾಗದಲ್ಲಿ ಗಾಯಗಳಾಗಿರುವ ಕುರುಹುಗಳಿದ್ದು, ಇದು ಕಾರಾಗೃಹ ಹಾಗೂ ಪೊಲೀಸ್ ಸಿಬ್ಬಂದಿಯ ಹಲ್ಲೆಯಿಂದ ಆಗಿರುವುದಾಗಿ ಸತೀಶ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಆಗಮಿಸಿ ಮೃತನ ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.