ಚಿಕ್ಕಮಗಳೂರು | ಮಲೆನಾಡು ಭಾಗದಲ್ಲಿ ಮುಂದುವರಿದ ಧಾರಾಕಾರ ಮಳೆ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು, ಕಳೆದ 5 ದಿನಗಳಿಂದ ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಪ್ರಮುಖ ನದಿಗಳಾದ ಹೇಮಾವತಿ, ಭದ್ರಾ ಹಾಗೂ ತುಂಗಾ ನದಿಗಳಲ್ಲಿ ನೀರಿನ ಹರಿವು ಕೊಂಚ ಏರಿಕೆ ಕಂಡಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮಾಯವಾಗಿದ್ದ ಮಳೆ ಮಧ್ಯರಾತ್ರಿ ಧಾರಾಕಾರವಾಗಿ ಸುರಿದಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯ ಅಲ್ಲಲ್ಲಿ ರಾತ್ರಿ ಉತ್ತಮ ಮಳೆಯಾಗಿದ್ದು, ಮಂಗಳವಾರ ಇಡೀ ದಿನ ಬಯಲು ಭಾಗದಲ್ಲಿ ಮಳೆ ಬಿಡುವು ನೀಡಿತ್ತು. ಸಂಜೆ ವೇಳೆ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ರಾತ್ರಿ ಮತ್ತೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಮಂಗಳವಾರ ಮಧ್ಯಾಹ್ನದ ವೇಳೆ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಬಾಳೆಹೊನ್ನೂರು, ಜಯಪುರ, ಬಸರೀಕಟ್ಟೆ, ಜಾವಳಿ, ಕುದುರೆಮುಖ, ಸಂಸೆ, ಹೊರನಾಡು, ಕೆರೆಕಟ್ಟೆ, ನೆಮ್ಮಾರು, ಕಿಗ್ಗಾದಂತಹ ಮಲೆನಾಡು ಭಾಗದ ಪ್ರದೇಶಗಳಲ್ಲಿ ಸುಮಾರು 1ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಕೆಲ ಹೊತ್ತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಾಹನಗಳ ಸಂಚಾರಕ್ಕೂ ತೊಂದರೆಯಾಗಿತ್ತು. ಹೊರನಾಡು, ಶೃಂಗೇರಿ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಬಂದಿದ್ದ ಯಾತ್ರಿಗಳು ಭಾರೀ ಮಳೆಯಿಂದಾಗಿ ತೊಂದರೆಗೀಡಾದರು.
ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಫಿ, ಅಡಿಕೆ ತೋಟಗಳಿಗೆ ಉತ್ತಮ ನೀರು ಒದಗಿಸಿದಂತಾಗಿದೆ. ಇದುವರೆಗೂ ಬಿಸಿಲಝಳದಿಂದ ತೋಟಗಳ ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಹಳ್ಳಕೊಳ್ಳ, ನದಿ, ಕೆರೆಕಟ್ಟೆ, ಕೊಳವೆಬಾವಿಗಳಿಂದ ಮೋಟರ್, ವಿದ್ಯುತ್ ಪಂಪ್‍ಸೆಟ್‍ಗಳ ಮೂಲಕ ನೀರು ಹಾಯಿಸಲು ಹೆಣಗಾಡುತ್ತಿದ್ದ ರೈತರು, ಬೆಳೆಗಾರರು ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.