ಚಿಕ್ಕಮಗಳೂರಿನಲ್ಲಿ ತಗ್ಗಿದ ಮಳೆ | ಹೆಚ್ಚಿದ ಗಾಳಿಯ ಅಬ್ಬರಕ್ಕೆ ಮನೆ, ವಿದ್ಯುತ್ ಕಂಬಗಳಿಗೆ ಹಾನಿ
ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯೊಂದಿಗೆ ನಿರಂತರವಾಗಿ ಭಾರೀ ಗಾಳಿ ಬೀಸುತ್ತಿದ್ದು, ಭಾರೀ ಗಾಳಿ ಮಳೆಯಿಂದಾಗಿ ಮಲೆನಾಡಿನ ಅಲ್ಲಲ್ಲಿ ಮರಗಳು ಉರುಳಿ ಮನೆ, ವಿದ್ಯುತ್ ಕಂಬಗಳಿಗೆ ಭಾರೀ ಹಾನಿ ಉಂಟಾಗಿದೆ.
ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿರುವ ಪರಿಣಾಮ ಮಲೆನಾಡು ಭಾಗದ ಬಹುತೇಕ ಗ್ರಾಮೀಣ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಜನಜೀವನವೂ ಅಸ್ತವ್ಯಸ್ತಗೊಂಡಿದ್ದು, ಬುಧವಾರ ಸಂಜೆ ವೇಳೆ ಮಳೆ ಮಲೆನಾಡು ಭಾಗದಲ್ಲಿ ಮತ್ತೆ ಬಿರುಸುಗೊಂಡಿದೆ.
ಮಲೆನಾಡಿನ ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳೆಹೊನ್ನೂರು, ಕೊಪ್ಪ, ನರಸಿಂಹರಾಜಪುರ ಚಿಕ್ಕಮಗಳೂರು ಸುತ್ತಮುತ್ತ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಆಗಾಗ್ಗೆ ಸಾಧಾರಣ ಮಳೆ ಹಾಗೂ ಭಾರೀ ಗಾಳಿಯ ತೀವ್ರತೆ ಹೆಚ್ಚಾಗಿದೆ. ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಧರೆಗುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರಗಳು ರಸ್ತೆಗೆ ಉರುಳಿದ್ದು, ಅಲ್ಲಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಘಟನೆಗಳು ಮಂಗಳವಾರ ಹಾಗೂ ಬುಧವಾರ ವರದಿಯಾಗಿವೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರೆ, ಮೆಸ್ಕಾಂ ಸಿಬ್ಬಂದಿ ಸುರಿಯುತ್ತಿರುವ ಮಳೆಯಲ್ಲೂ ಹಗಲು ರಾತ್ರಿ ಎನ್ನದೇ ವಿದ್ಯುತ್ ಕಂಬಗಳ ದುರಸ್ತಿಗೆ ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು, ತಂತಿಗೆ ಹಾನಿಯಾಗಿದ್ದು, ಕೋಟ್ಯಾಂತರ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಕಳಸ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ವೃದ್ದೆಯೊಬ್ಬರ ಮನೆ ಮೇಲೆ ಮರ ಬಿದ್ದು ಮನೆ ಜಖಂ ಗೊಂಡಿದ್ದರೆ, ವೃದ್ದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರೀ ಗಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ಜನರ ಆತಂಕದಿಂದಲೇ ಬದುಕುವಂತಾಗಿದ್ದು, ಮರಗಳು ಮನೆಗಳ ಮೇಲೆ ಬಿದ್ದು ಪ್ರಾಣಕ್ಕೆ ಕುತ್ತು ತರುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.
ಇನ್ನು, ಮಲೆನಾಡಿನ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿನ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಪ್ರವಾಹಕ್ಕೆ ಒಳಗಾಗಿದ್ದ ಜಮೀನುಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಳ್ಳಕೊಳ್ಳಗಳಲ್ಲಿನ ನೀರಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ನದಿಗಳು, ಹಳ್ಳಗಳು ಸಹಜ ಸ್ಥಿತಿಗೆ ಸ್ಥಿತಿಗೆ ಮರಳಿವೆ. ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿನ ಹಲವಾರು ಸಣ್ಣಪುಟ್ಟ ಕೆರೆಗಳು ಕೋಡಿಬಿದ್ದಿವೆ. ಮಳೆ ಕಡಿಮೆಯಾದರೂ ಕಳೆದ ಮೂನಾಲ್ಕು ದಿನಗಳಿಂದ ಗಾಳಿಯ ಅಬ್ಬರ ಜೋರಾಗಿದೆ.