ಚಿಕ್ಕಮಗಳೂರು | ಭಾರೀ ಮಳೆ, ಬಿರುಗಾಳಿಗೆ ಮಲೆನಾಡಿನ ಜನ ತತ್ತರ : ಮನೆಗಳಿಗೆ ಹಾನಿ, ತೋಟ, ಗದ್ದೆಗಳು ಜಲಾವೃತ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ, ಬಿರುಗಾಳಿಯ ಅಬ್ಬರ ಮತ್ತಷ್ಟು ಜೋರಾಗಿದ್ದು, ಧಾರಾಕಾರ ಮಳೆ ಹಾಗೂ ಭಾರೀ ಶಬ್ಧದೊಂದಿಗೆ ಬೀಸುತ್ತಿರುವ ಬಿರುಗಾಳಿಗೆ ಮಲೆನಾಡು ಭಾಗದಲ್ಲಿ ಶುಕ್ರವಾರ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಮಳೆ, ಗಾಳಿ ಹೊಡೆತಕ್ಕೆ ಮನೆಗಳು, ಮರಗಳು, ವಿದ್ಯುತ್ ಕಂಬಗಳು ತರಗೆಲೆಗಳಂತೆ ಧರಾಶಾಹಿಯಾಗುತ್ತಿರುವುದು ಒಂದೆಡೆಯಾದರೇ, ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಹೊಲ, ಗದ್ದೆ, ಕಾಫಿ, ಅಡಿಕೆ ತೋಟಗಳು, ಶುಂಠಿ ಬೆಳೆ ಜಲಾವೃತಗೊಂಡಿದ್ದು, ಮಲೆನಾಡಿನ ಬಹುತೇಕ ಗ್ರಾಮಗಳು ವಿದ್ಯುತ್ ಕಡಿತದಿಂದಾಗಿ ಕತ್ತಲೆಯಲ್ಲಿ ಮುಳುಗಿವೆ.
ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಮಲೆನಾಡು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯೊಂದಿಗೆ ಬಿರುಗಾಳಿ ಅಬ್ಬರ ಜೋರಾಗಿತ್ತು. ಭಾರೀ ಮಳೆ ಗಾಳಿಯಿಂದಾಗಿ ಅಲ್ಲಲ್ಲಿ ಭಾರೀ ಗಾತ್ರದ ಮರಗಳು ಧರೆಗುರುಳಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೇ ವಾಹನಗಳ ಮರ ಬಿದ್ದು ಜಖಂಗೊಂಡ ಘಟನೆಗಳು ವರದಿಯಾಗಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಕೃಷಿ ಬೆಳೆಗಳಿಗೆ ಹಾನಿಯಾಗಿದೆ.
ಮಲೆನಾಡು ಭಾಗದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಮೂಡಿಗೆರೆ, ಕಳಸ, ಹೊರನಾಡು, ಕೊಟ್ಟಿಗೆಹಾರ, ಚಾರ್ಮಾಡಿಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಶೃಂಗೇರಿ ವ್ಯಾಪ್ತಿಯಲ್ಲಿ ಹರಿಯುವ ತುಂಗಾನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತೀರದ ಪ್ಯಾರಲರ್ ರಸ್ತೆವರೆಗೂ ನದಿನೀರು ಬಂದಿದೆ. ನದಿಪಾತ್ರದ ಅಡಿಕೆ ತೋಟ ಸೇರಿದಂತೆ ತಗ್ಗು ಪ್ರದೇಶವನ್ನು ತುಂಗಾ ನದಿ ನೀರು ಆವರಿಸಿದೆ. ಪಟ್ಟಣದ ಗಾಂಧಿಮೈದಾನ ಜಲಾವೃತಗೊಂಡಿದೆ. ಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಅಲ್ಲದೇ ಹೆಬ್ಬಾಳೆ ಸೇತುವೆ ಶುಕ್ರವಾರವೂ ಮುಳುಗಡೆಯಾಗಿದ್ದು, ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಗವನಹಳ್ಳಿ ಸಮೀಪ ಶುಕ್ರವಾರ ಬೆಳಗ್ಗೆ ಮರವೊಂದು ದಿಢೀರ್ ರಸ್ತೆ ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿದ್ದ ಒಂದು ಆಟೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರೆ, ಎರಡು ಕಾರುಗಳ ಮುಂಭಾಗ ಜಖಂಗೊಂಡಿದೆ. ಕಾರಿನ ಮೇಲೆ ಬಿದ್ದು ಕಾರುಗಳ ಜಖಂಗೊಂಡಿವೆ. ಆಟೊ ಮತ್ತು ಕಾರಿನಲ್ಲಿದ್ದವರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೊಪ್ಪ ತಾಲೂಕು ಬಸರಿಕಟ್ಟೆ ಗ್ರಾಮದಲ್ಲಿ ದೇವಾಲಯದ ತಡಗೋಡೆ ಕುಸಿದು ದೇವಾಲಯ ಮಣ್ಣಿನಲ್ಲಿ ಮುಚ್ಚಿಹೋಗಿದೆ. ಗ್ರಾಮದ ಕೊಡಮಣಿ ತಾಯಿ ದೇವಾಲಯ ನೆಲಸಮಗೊಂಡಿದ್ದು, ಮತ್ತೊಂದು ದೇವಾಲಯದ ಬಳಿಯೂ ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ಕೊಪ್ಪ ತಾಲೂಕಿನಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಕಾನೂರಿನಿಂದ ಕಟ್ಟಿಮನೆ ಗ್ರಾಮಕ್ಕೆ ತೆರಳುವ ರಸ್ತೆ ನದಿ ನೀರಿನಿಂದ ಮುಳುಗಡೆಯಾಗಿದ್ದು, ಜನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.