ಚಿಕ್ಕಮಗಳೂರು | ಕಾಡಾನೆ ದಾಳಿಗೆ ರೈತ ಬಲಿ ; ಮಲೆನಾಡು ಭಾಗದಲ್ಲಿ 20 ದಿನಗಳ ಅಂತರದಲ್ಲಿ ಇಬ್ಬರ ಮೃತ್ಯು
ಏಲಿಯಾಸ್(65)
ಚಿಕ್ಕಮಗಳೂರು : ಕಾಡಾನೆ ದಾಳಿಯಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ಮುತ್ತಿಕೊಪ್ಪ ಗ್ರಾಪಂ ವ್ಯಾಪ್ತಿಯ ಯಕ್ಕಡಬೈಲು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಯಕ್ಕಡಬೈಲು ಗ್ರಾಮದ ಏಲಿಯಾಸ್(65) ಮೃತಪಟ್ಟ ರೈತ. ಗುರುವಾರ ಮಧ್ಯಾಹ್ನ ಏಲಿಯಾಸ್ ತಮ್ಮ ಮಗ ವರ್ಗೀಸ್ ಜತೆ ಮನೆಯ ಹಿಂಭಾಗದಲ್ಲಿ ಇರುವ ಕಾಡಿಗೆ ಮೇಯಲು ತೆರಳಿದ್ದ ಜಾನುವಾರುಗಳನ್ನು ಕರೆತರಲು ಹೋಗಿದ್ದ ವೇಳೆ ಒಂಟಿ ಸಲಗ ದಾಳಿ ಮಾಡಲು ಮುಂದಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರು ಓಡುತ್ತಿದ್ದ ವೇಳೆ ಏಲಿಯಾಸ್ ನಿಯಂತ್ರಣ ತಪ್ಪಿ ನೆಲದ ಮೇಲೆ ಬಿದ್ದಿದ್ದಾರೆ. ಈ ವೇಳೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿ ಏಲಿಯಾಸ್ರನ್ನು ಕಾಲಿನಲ್ಲಿ ತುಳಿದು ಕೊಂದು ಹಾಕಿದೆ. ವರ್ಗೀಸ್ ಮರವೊಂದನ್ನು ಏರಿ ಕುಳಿತ ಪರಿಣಾಮ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ನ.20ರಂದು ಕೊಪ್ಪ ತಾಲೂಕಿನ ಸೀತೂರು ಗ್ರಾಪಂ ವ್ಯಾಪ್ತಿಯ ಕೆರೆಗದ್ದೆ ಗ್ರಾಮದಲ್ಲಿ ಉಮೇಶ್ ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಈ ಘಟನೆ ಬೆನ್ನಲ್ಲೇ ಯಕ್ಕಡಬೈಲು ಗ್ರಾಮದಲ್ಲಿ ಏಲಿಯಾಸ್ ಎಂಬ ರೈತ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆ ಮೂಲಕ ಕಳೆದ 20 ದಿನಗಳಲ್ಲಿ ಕಾಡಾನೆ ದಾಳಿಗೆ ಮಲೆನಾಡು ಭಾಗದಲ್ಲಿ ಇಬ್ಬರು ರೈತರು ಮೃತಪಟ್ಟಿದ್ದಾರೆ.
ರೈತರಿಂದ ಪ್ರತಿಭಟನೆ :
ಎನ್.ಆರ್.ಪುರ ತಾಲೂಕಿನಲ್ಲಿ ಗುರುವಾರ ಕಾಡಾನೆ ದಾಳಿಯಿಂದ ರೈತ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು, ರಾಜಕೀಯ, ರೈತಸಂಘಟನೆಗಳ ಮುಖಂಡರು ಸ್ಥಳದಲ್ಲಿ ಜಮಾಯಿಸಿ ರೈತ ಏಲಿಯಾಸ್ ಮೃತದೇಹ ದೊಂದಿಗೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಬಿಗುವಿನ ಪರಿಸ್ಥಿತಿಯನ್ನು ನಿಯಂತ್ರಿಸಿದರು.