ಚಿಕ್ಕಮಗಳೂರು | ಜೋಳದ ಚಿಗುರು ತಿಂದು 6 ಜಾನುವಾರುಗಳು ಸಾವು: 30 ಜಾನುವಾರುಗಳು ಅಸ್ವಸ್ಥ
ಚಿಕ್ಕಮಗಳೂರು: ಜೋಳದ ಚಿಗುರು ತಿಂದು 6 ಜಾನುವಾರುಗಳು ಮೃತಪಟ್ಟಿದ್ದು, 30 ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ರವಿವಾರ ತಾಲೂಕಿನ ಹಿರೇಗೌಜ ಗ್ರಾಪಂ ವ್ಯಾಪ್ತಿಯ ಕುರಿಚಿಕ್ಕನಗಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಕುರಿಚಿಕ್ಕನಹಳ್ಳಿ ಗ್ರಾಮದಲ್ಲಿ ಜೋಳದ ಹೊಲದಲ್ಲಿ ಕಟಾವು ಮಾಡಿ ಹಾಕಿದ್ದ ಜೋಳದ ಗಿಡದ ಹತ್ತಿರ ಸ್ಥಳೀಯ ರೈತರು ತಮ್ಮ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಕೆಲ ಜಾನುವಾರುಗಳು ಜೋಳದ ಗಿಡಗಳಲ್ಲಿದ್ದ ಚಿಗುರುಗಳನ್ನು ತಿಂದು ಅಸಸ್ಥಗೊಂಡಿವೆ. ಜಾನುವಾರು ಅಸ್ವಸ್ಥಗೊಂಡು ನಿತ್ರಾಣಗೊಂಡಿರುವುದನ್ನು ಕಂಡ ರೈತರು ಕೂಡಲೇ ಸ್ಥಳೀಯ ಪಶುವೈದ್ಯರಿಗೆ ಸುದ್ದಿ ಮುಟ್ಟಿಸಿದ್ದಾರೆ.
ವೈದ್ಯರು ಸ್ಥಳಕ್ಕೆ ಬಂದು ಅಸ್ವಸ್ಥಗೊಂಡಿದ್ದ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರೂ 6 ಜಾನುವಾರುಗಳ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. 30 ಜಾನುವಾರುಗಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಜೋಳದ ಗಿಡಗಳಲ್ಲಿ ಜೋಳ ಕಟಾವು ಮಾಡಿದ ಬಳಿಕ ಗಿಡಗಳನ್ನು ಒಣಗಿಸಿ ಮೇವಿಗೆ ಬಳಸಲಾಗುತ್ತದೆ. ಆದರೆ ಕೆಲ ಗಿಡಗಳಲ್ಲಿ ಚಿಗುರು ಬಂದಿದ್ದು, ಈ ಚಿಗುರಿನಲ್ಲಿ ರಾಸಾಯನಿಕ ಉತ್ಪಾದನೆಯಾಗುತ್ತದೆ. ಇದನ್ನು ತಿಂದ ಜಾನವಾರುಗಳು ಅಸ್ಪಸ್ಥಗೊಳ್ಳುವುದು ಸಾಮಾನ್ಯ. ಜಾನುವಾರುಗಳು ಅತಿಯಾಗಿ ಚಿಗುರು ತಿಂದಲ್ಲಿ ಸಾವಿಗೀಡಾಗುತ್ತವೆ. ಕುರಿ ಚಿಕ್ಕನಹಳ್ಳಿ ಗ್ರಾಮದಲ್ಲಿ ಕೆಲ ಜಾನುವಾರುಗಳು ಜೋಳದ ಚಿಗುರನ್ನು ಅತಿಯಾಗಿ ತಿಂದ ಪರಿಣಾಮ ಸಾವನ್ನಪ್ಪಿವೆ ಎಂದು ಹೇಳಲಾಗಿದೆ.
ಅಸ್ಪಸ್ಥಗೊಂಡಿದ್ದ 30 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಅವುಗಳು ಚೇತರಿಸಿಕೊಂಡಿವೆ ಎಂದು ಸ್ಥಳಕ್ಕೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿದ್ದ ತಂಡದ ಮುಖ್ಯಸ್ಥ ಹಾಗೂ ಪಶು ಇಲಾಖೆ ಉಪನಿರ್ದೇಶಕ ಹೇಮಂತ್ ತಿಳಿಸಿದ್ದಾರೆ.
ಜಾನುವಾರುಗಳು ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಎಚ್.ಡಿ.ತಮ್ಮಯ್ಯ ಪಶು ವೈದ್ಯರ ತಂಡದೊಂದಿಗೆ ಜಾನುವಾರುಗಳಿಗೆ ಚಿಕಿತ್ಸೆ ನೀಡುವಲ್ಲಿ ನೆರವಾದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಜಾನುವಾರುಗಳನ್ನು ಕೆಲ ಹೊತ್ತು ಉಪಚರಿಸಿದರು.