ಚಿಕ್ಕಮಗಳೂರು: 6 ಮಂದಿ ಪೊಲೀಸರ ಅಮಾನತು; ಕೆಲಸ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ನಡೆಸಿದ ಪೊಲೀಸರು
ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣ
ಚಿಕ್ಕಮಗಳೂರು: ನಗರದಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ಆರೋಪ ಸಂಬಂಧ ನಗರ ಠಾಣೆಯ ಪಿಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದು, ಬಂಧನದ ಭೀತಿಯಲ್ಲಿರುವ 6ಮಂದಿ ಪೊಲೀಸರ ಪರ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿ ಮೌನ ಪ್ರತಿಭಟನೆಗೆ ನಡೆಸಿದ್ದಾರೆ.
ಶನಿವಾರ ರಾತ್ರಿ ನಗರ ಠಾಣೆ ಎದುರು ಕೆಲಸ ಸ್ಥಗಿತಗೊಳಿಸಿ ಜಮಾಯಿಸಿದ ನಗರ ವ್ಯಾಪ್ತಿಯ 6 ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಹಾಗೂ ಕಟುಂಬಸ್ಥರು, ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅವರ ಬಳಿ ಪೊಲೀಸರು ಅಳಲು ತೋಡಿಕೊಂಡರು.
ಹೆಲ್ಮೇಟ್ ವಿಚಾರಕ್ಕೆ ಯುವ ವಕೀಲ ಪ್ರೀತಮ್ ಎಂಬವರನ್ನು ರಸ್ತೆಯಲ್ಲಿ ಅಡ್ಡ ಹಾಕಿದ ಪೊಲೀಸರು ದಂಡ ಕಟ್ಟಿಸಿಕೊಳ್ಳುವ ನೆಪದಲ್ಲಿ ವಕೀಲನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆಂಬ ಪ್ರಕರಣ ಸಂಬಂಧ ನಗರ ಠಾಣೆಯ ಪಿಎಸ್ ಐ ಸೇರಿದಂತೆ ಆರು ಮಂದಿ ಪೊಲೀಸರನ್ನು ಎಸ್ಪಿ ಡಾ.ವಿಕ್ರಮ್ ಅಮಟೆ ಅವರು ಅಮಾನತು ಮಾಡಿದ್ದು, ಅಮಾನತುಗೊಂಡಿರುವ ಪೊಲೀಸರು ಇದೀಗ ಬಂಧನ ಭೀತಿಯಲ್ಲಿದ್ದಾರೆ. ಈ ಘಟನೆಯಿಂದ ನೊಂದಿರುವ ಆರೋಪಿ ಪೊಲೀಸರ ಕುಟುಂಬಸ್ಥರು ಶನಿವಾರ ನಗರ ಠಾಣೆಯಲ್ಲಿ ಧರಣಿ ನಡೆಸಿ ನಂತರ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರು ಹಾಗೂ ಅವರ ಕುಟುಂಬಸ್ಥರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಅಮಾನತುಗೊಂಡಿರುವ ಆರು ಮಂದಿ ಪೊಲೀಸರ ಪರ ಕುಟುಂಬಸ್ಥರು ಬೀದಿಗಿಳಿದಿರುವುದರ ಮಧ್ಯೆ ನಗರವ್ಯಾಪ್ತಿಯ 6ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಯೂ ಬೀದಿಗಿಳಿದಿದ್ದು, ಶನಿವಾರ ರಾತ್ರಿ ತಮ್ಮ ಕೆಲಸ ಸ್ಥಗಿತಗೊಳಿಸಿ ಪೊಲೀಸರಿಗೆ ರಕ್ಷಣೆ ನೀಡಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅಮಾನತುಗೊಂಡಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹೆಲ್ಮೇಟ್ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ವಕೀಲ ಪ್ರೀತಮ್ ಠಾಣೆಯ ಬಳಿ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವಕೀಲ ಪ್ರೀತಮ್ ಬೆಂಬಲಕ್ಕೆ ಬಂದ ವಕೀಲರ ಗುಂಪು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ಪಾಲಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಪೊಲೀಸ್ ಠಾಣೆ ಬಳಿ ಗುಂಪು ಸೇರಿಸಿಕೊಂಡು ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ವಕೀಲರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರು ಹಾಗೂ ಕುಟುಂಬಸ್ಥರ ಅಳಲು ಕೇಳಿದ ಎಸ್ಪಿ ಡಾ.ವಿಕ್ರಮ್ ಅಮಟೆ, ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿ, ಪೊಲೀಸರು ಕರ್ತವ್ಯಕ್ಕೆ ಮರಳಬೇಕೆಂದು ಸೂಚಿಸಿದರು.