ಚಿಕ್ಕಮಗಳೂರು | ಕೋರ್ಟ್ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನಗೊಂಡ ರೈತನೊಬ್ಬ ನ್ಯಾಯಾಲಯದ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಡೂರು ಪಟ್ಟಣದಲ್ಲಿ ಶುಕ್ರವಾರ ವರದಿಯಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ರೈತನ್ನು ಕಡೂರು ತಾಲೂಕಿನ ಕಾರೇಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಅವರ ಜಮೀನಿನ ವಿಚಾರ ಸಂಬಂಧದ ವ್ಯಾಜ್ಯ ಕಡೂರು ಸಿವಿಲ್ ಕೋರ್ಟ್ನಲ್ಲಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ಬಳಿಕ, ತೀರ್ಪು ರೈತನ ವಿರುದ್ಧ ಬಂದಿತ್ತು. ಆದರೆ ಈ ತೀರ್ಪುನ ವಿರುದ್ಧ ರೈತ ಮಲ್ಲಿಕಾರ್ಜುನ ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಿದ್ದಾದರೂ, ಶುಕ್ರವಾರ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆದಿದ್ದು, ಮತ್ತೆ ತೀರ್ಪು ರೈತ ಮಲ್ಲಿಕಾರ್ಜುನನ ವಿರುದ್ಧ ಬಂದಿತ್ತು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ರೈತ ನನಗೆ ಅನ್ಯಾಯ ಆಗಿದೆ ಎಂದು ನ್ಯಾಯಾಲಯದ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಕೂಡಲೇ ರೈತನನ್ನು ತಾಲೂಕು ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹಾಸನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.