ಚಿಕ್ಕಮಗಳೂರು | ಕಚ್ಚಿದ್ದು ಹಾವು ; ಮುಳ್ಳು ಚುಚ್ಚಿದೆ ಎಂದು ಭಾವಿಸಿದ ರೈತ ಮಲಗಿದ್ದಲ್ಲೇ ಮೃತ್ಯು
ಗಂಗಪ್ಪ(58)
ಚಿಕ್ಕಮಗಳೂರು : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಹಾವು ಎರಡು ಬಾರಿ ಕಡಿದರೂ ಗೊತ್ತಾಗದ ರೈತರೊಬ್ಬರು ಮುಳ್ಳು ಚುಚ್ಚಿದೆ ಭಾವಿಸಿ, ರಾತ್ರಿ ಮನೆಯಲ್ಲಿ ಮಲಗಿದ್ದಾಗಲೇ ಮೃತಪಟ್ಟಿರುವ ಘಟನೆ ಸೋಮವಾರ ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ವರದಿಯಾಗಿದೆ.
ಕರಕುಚ್ಚಿ ಗ್ರಾಮದ ರೈತ ಗಂಗಪ್ಪ(58) ಹಾವು ಕಡಿದು ಮೃತಪಟ್ಟ ರೈತನಾಗಿದ್ದು, ರವಿವಾರ ಸಂಜೆ ಗ್ರಾಮದಲ್ಲಿದ್ದ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗಂಗಪ್ಪ ಅವರ ಕಾಲಿಗೆ ವಿಷಕಾರಿ ಹಾವೊಂದು ಎರಡು ಬಾರಿ ಕಚ್ಚಿದೆ. ಆದರೆ ಕಚ್ಚಿದ ಹಾವು ರೈತನಿಗೆ ಕಾಣದೇ ಇದ್ದಿದ್ದರಿಂದ ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಭಾವಿಸಿ ರೈತ ಮನೆಗೆ ತೆರಳಿದ್ದಾರೆ. ಈ ವೇಳೆ ಕಾಲಿಗೆ ಮುಳ್ಳು ಚುಚ್ಚಿದೆ, ಸುಸ್ತಾಗುತ್ತಿದೆ ಎಂದು ಮನೆಯವರ ಬಳಿ ಹೇಳಿದ್ದಾರೆ. ನಂತರ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ರಾತ್ರಿ ಹಾವಿನ ವಿಷವೇರಿ ಮಲಗಿದ್ದಲ್ಲೇ ರೈತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ಗಂಗಪ್ಪ ಮಲಗಿದ್ದಲ್ಲಿಂದ ಏಳದೆ ಇದ್ದಾಗ ಮನೆ ಮಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ರೈತ ಗಂಗಪ್ಪ ಹಾವು ಕಡಿದು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆಂದು ತಿಳಿದು ಬಂದಿದೆ.