ಚಿಕ್ಕಮಗಳೂರು | ಚಾಲಕನ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ: ಕೆಎಸ್ಸಾರ್ಟಿಸಿ ಡಿಸಿ ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರೊಬ್ಬರನ್ನು ಬೇರೆಡೆಗೆ ವರ್ಗಾವಣೆ ಮಾಡಲು ಲಂಚ ಪಡೆಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಜಿಲ್ಲಾ ಅಧಿಕಾರಿ ಬಸವರಾಜ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚಾಲಕರೊಬ್ಬರು ಚಿಕ್ಕಮಗಳೂರು ವಿಭಾಗದಿಂದ ಬೇರೆಡೆಗೆ ವರ್ಗಾವಣೆ ಮಾಡುವಂತೆ ಅಧಿಕಾರಿ ಬಸವರಾಜ್ ಅವರಿಗೆ ತಿಳಿಸಿದ್ದರು. ವರ್ಗಾವಣೆ ಮಾಡಬೇಕಾದರೇ 10ಸಾವಿರ ಹಣ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಚಾಲಕ ಲೋಕಾಯುಕ್ತರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಮಂಗಳವಾರ ಬಸವರಾಜ್ ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಬಸವರಾಜ್ ಹಾಗೂ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಬಸವರಾಜ್ ಪ್ರಮುಖ ಆರೋಪಿಯಾಗಿದ್ದು, ಕಾರು ಚಾಲಕ ಎರಡನೇ ಆರೋಪಿಯಾಗಿದ್ದಾನೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ಸೇರಿದಂತೆ ಇತರೆ ಸಿಬ್ಬಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಅಧಿಕಾರಿ ಬಸವರಾಜ್ ಮೇಲೆ ಈ ಹಿಂದೆ ಅನೇಕ ಆರೋಪಗಳು ಕೇಳಿ ಬಂದಿದ್ದವು. ನೌಕರರ ವರ್ಗಾವಣೆ ಮಾಡಲು ಮತ್ತು ರಜೆ ನೀಡಲು, ಮಾರ್ಗ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆಂದು ಸಂಘ ಸಂಸ್ಥೆಗಳು ಆರೋಪಿಸಿದ್ದರು.