ಚಿಕ್ಕಮಗಳೂರು| ದತ್ತಮಾಲಾಧಾರಿಗಳಿಂದ ದರ್ಗಾಕ್ಕೆ ಹಾನಿ: ಆರೋಪ
ಚಿಕ್ಕಮಗಳೂರು: ದತ್ತಜಯಂತಿಯಂದೇ ದತ್ತಮಾಲಾಧಾರಿಗಳು ಚಿಕ್ಕಮಗಳೂರು- ತರೀಕೆರೆ ರಾಜ್ಯ ಹೆದ್ದಾರಿ ಹತ್ತಿರ ಇರುವ ದರ್ಗಾದ ಬಳಿ ಅನುಚಿತವಾಗಿ ವರ್ತಿಸಿ ದರ್ಗಾಕ್ಕೆ ಹಾನಿ ಮಾಡಿರುವ ಘಟನೆ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ದರ್ಗಾದ ಬಳಿ ಭದ್ರಾವತಿ ತಾಲೂಕಿನಿಂದ ಸುಮಾರು 25 ಬೈಕ್ ಗಳಲ್ಲಿ ಆಗಮಿಸಿದ್ದ ದತ್ತಮಾಲಾಧಾರಿಗಳು ದರ್ಗಾದ ಬಳಿ ಬೈಕ್ ನಿಲ್ಲಿಸಿಕೊಂಡು ಜೈಶ್ರೀರಾಮ್ ಘೋಷಣೆ ಕೂಗುತ್ತ ಗೊಂದಲ ಸೃಷ್ಟಿಸಿದ್ದಾರೆ. ಈ ವೇಳೆ ದರ್ಗಾದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ದತ್ತಮಾಲಾಧಾರಿಗಳನ್ನು ಮುಂದೆ ಹೋಗುವಂತೆ ತಿಳಿಸಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿದ ದತ್ತಮಾಲಾಧಾರಿಗಳು ದರ್ಗಾದ ಬಳಿ ಆಗಮಿಸಿ ಹಸಿರು ಬಾವುಟವನ್ನು ಕಿತ್ತು ಹಾಕಿದ್ದಲ್ಲದೇ ಅಲ್ಲಿದ್ದ ಕಾಣಿಕೆ ಡಬ್ಬಿಗೂ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ದರ್ಗಾದ ಮೇಲಿದ್ದ ಸಣ್ಣ ಗುಮ್ಮಟಕ್ಕೂ ಹಾನಿ ಮಾಡಿದ್ದಾರೆಂದು ತಿಳಿದು ಬಂದಿದ್ದು, ದತ್ತಮಾಲಾಧಾರಿಗಳು ದರ್ಗಾದ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಂ ಸಮುದಾಯದವರು ಹಾಗೂ ದಲಿತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬರುತ್ತಿದ್ದಂತೆ ದತ್ತಮಾಲಾಧಾರಿಗಳು ಬೈಕ್ ಏರಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ದರ್ಗಾಕ್ಕೆ ಹಾನಿಯಾಗುವುದನ್ನು ತಡೆಯಲು ಮುಂದಾದ ಪೊಲೀಸರ ಮೇಲೂ ದತ್ತಮಾಲಾಧಾರಿಗಳು ಹಲ್ಲೆ ಮಾಡಿದ್ದು, ಒರ್ವ ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಸ್ಥಳೀಯರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
ದರ್ಗಾದ ಆವರಣದಲ್ಲಿ ಸಿಸಿ ಕ್ಯಾಮರ ಅಳವಡಿಸಿದ್ದು , ಕಟ್ಟಡಕ್ಕೆ ಹಾನಿಮಾಡಿದ ಕಿಡಿಗೇಡಿತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು, ದರ್ಗಾಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು, ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿದ್ದಾರೆ.
ಘಟನಾ ಸ್ಥಳಕ್ಕೆ ತರಿಕೆರೆ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿದ್ದಾರೆ. ಲಿಂಗದಹಳ್ಳಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ