ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನ: ಸಂಘ ಪರಿವಾರದ ಕಾರ್ಯಕರ್ತರು ಪೊಲೀಸ್ ವಶಕ್ಕೆ
ದತ್ತಪೀಠದಲ್ಲಿ ಶ್ರೀರಾಮ ತಾರಕ ಹೋಮ ನಡೆಸಲು ಅವಕಾಶ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ
ಚಿಕ್ಕಮಗಳೂರು, ಜ.22: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಬಾ ಬಡಾನ್ ಗಿರಿಯ ದತ್ತಪೀಠದಲ್ಲಿ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘ ಪರಿವಾರವು ಶ್ರೀರಾಮ ತಾರಕ ಹೋಮ ನಡೆಸಲು ಮುಂದಾಗಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಸಂಘ ಪರಿವಾರದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ದಿಡೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಲು ಯತ್ನಿಸಿ ಗೊಂದಲ ಸೃಷ್ಟಿಸಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋಮಕುಂಡವಿಟ್ಟು ಪ್ರತಿಭಟನೆ ನಡೆಸಿದ ಸಂಘ ಪರಿವಾರದ ಕಾರ್ಯಕರ್ತರು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಲು ಅವಕಾಶವಿಲ್ಲ, ಸ್ಥಳದಿಂದ ತೆರಳುವಂತೆ ಸೂಚಿಸಿದರು. ಆದರೆ ಇದಕ್ಕೆ ಬಗ್ಗದ ಕಾರ್ಯಕರ್ತರು ದತ್ತ ಪೀಠದಲ್ಲಿ ಹೋಮ ಮಾಡಿಯೇ ತೀರುತ್ತೇವೆಂದು ಅಲ್ಲಿಗೆ ತೆರಳಲು ಮುಂದಾದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಆದರೆ ಇದಕ್ಕೆ ಬಗ್ಗದ ಪ್ರತಿಭಟನಾಕಾರರು ಪೊಲೀಸರ ಜೊತೆಯೇ ವಾಗ್ವಾದಕ್ಕಿಳಿದರು. ಕೆಲವು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೂ ನುಗ್ಗಲು ಯತ್ನಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದರು. ಖುದ್ದು ಎಸ್ಪಿ ಅವರೇ ಕಾರ್ಯಕರ್ತರನ್ನು ಎಳೆದು ಪೊಲೀಸ್ ವಾಹನಕ್ಕೆ ಹತ್ತಿಸಲು ಮುಂದಾದರು. ಈ ವೇಳೆ ಕಾರ್ಯಕರ್ತರು ಎಸ್ಪಿಯವರನ್ನೂ ಎಳೆದಾಡಿದರು.
ಬಳಿಕ ಸ್ಥಳದಲ್ಲಿದ್ದ ದತ್ತಪೀಠ ಸಂವರ್ಧನ ಸಮಿತಿಯ ಕೆಲ ಸದಸ್ಯರನ್ನು ಹಾಗೂ ಪ್ರತಿಭಟನಾಕಾರರನ್ನೆಲ್ಲ ವಶಕ್ಕೆ ಪಡೆದು ವಾಹನದಲ್ಲಿ ಬಸವನಹಳ್ಳಿ ಠಾಣೆಗೆ ಕರೆದೊಯ್ದರು.
ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ವೇಳೆ ನಗರದ ತೊಗರಿ ಹಂಕಲ್ ಸರ್ಕಲ್ ಬಳಿ ಸಂಘ ಪರಿವಾರದ ಕೆಲವು ಕಾರ್ಯಕರ್ತರು ಪೊಲೀಸ್ ವಾಹನಗಳನ್ನು ಅಡ್ಡಗಟ್ಟಿದರು. ವಾಹನ ತಡೆದ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದು ಅವರೆಲ್ಲರನ್ನೂ ಬಸವನಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಠಾಣೆ ಎದುರು ಜಮಾಯಿಸಿದ ಸಂಘ ಪರಿವಾರದ ಕಾರ್ಯಕರ್ತರು ಮತ್ತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಬಸವನಹಳ್ಳಿ ಠಾಣೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವೇಳೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, "ಬಂಧಿಸಿದರೆ ಪರಿಣಾಮ ಸರಿ ಇರಲ್ಲ, ಜಿಲ್ಲಾದ್ಯಂತ ಬೆಂಕಿ ಬೀಳುತ್ತದೆ" ಎಂದು ಪೊಲೀಸರಿಗೇ ಬೆದರಿಕೆ ಹಾಕಿದ ಘಟನೆಯೂ ನಡೆಯಿತು.
ಬಳಿಕ ವಶಕ್ಕೆ ಪಡೆದವರನ್ನು ಪೊಲೀಸರು ಬಿಡುಗಡೆ ಮಾಡಿದರು.