ಚಿಕ್ಕಮಗಳೂರು | ಭಯ ಹುಟ್ಟಿಸಲು ಕಾರಿನಲ್ಲಿ ಲಾಂಗ್ ಹಿಡಿದು ಓಡಾಟ : ಇಬ್ಬರ ಬಂಧನ
ಆರೋಪಿಗಳಾದ ಸಲ್ಮಾನ್/ಮುಹಮ್ಮದ್ ಸಾದಿಕ್
ಚಿಕ್ಕಮಗಳೂರು : ಕಾರಿನಲ್ಲಿ ಲಾಂಗ್ ಇಟ್ಟುಕೊಂಡು ಓಡಾಡುತ್ತಿದ್ದ ಹಾಗೂ ಲಾಂಗ್ ಹಿಡಿದು ಪೊಟೊ ತೆಗೆಸಿಕೊಂಡು ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿರುವ ಘಟನೆ ರವಿವಾರ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ನಿವಾಸಿಗಳಾಗಿರುವ ಸಲ್ಮಾನ್(22), ಮುಹಮ್ಮದ್ ಸಾದಿಕ್(25) ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಎನ್.ಆರ್.ಪುರ ಪಟ್ಟಣದಲ್ಲಿ ಮೆಕಾನಿಕ್ ನಡೆಸುತ್ತಿದ್ದು, ಕಾರಿನಲ್ಲಿ ಓಡಾಡುವಾಗ ಲಾಂಗ್, ತಲ್ವಾರ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರಲ್ಲದೇ, ಕಾರಿನಲ್ಲಿ ಲಾಂಗ್, ತಲ್ವಾರ್ ಹಿಡಿದ ಪೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ರವಿವಾರವೂ ಈ ಆರೋಪಿಗಳು ಕಾರಿನಲ್ಲಿ ಲಾಂಗ್ ಹಿಡಿದು ಓಡಾಡುತ್ತಿದ್ದರೆಂದು ಹೇಳಲಾಗಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬೆನ್ನು ಹತ್ತಿದ್ದು, ಪೊಲೀಸರನ್ನು ಕಂಡ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ. ಈ ವೇಳೆ ಸಿನಿಮೀಯ ರೀತಿಯಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ಬಂಧಿಸಿ ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ತಮ್ಮನ್ನು ನೋಡಿ ಸಾರ್ವಜನಿಕರು ಹೆದರಿಕೊಳ್ಳಲಿ ಎಂದು ಹೀಗೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.