ಚಿಕ್ಕಮಗಳೂರು | ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಅಕ್ರಮ: ಗ್ರಾಮ ಆಡಳಿತಾಧಿಕಾರಿ ಅಮಾನತು
ಕ್ರಿಮಿನಲ್ ಪ್ರಕರಣ ದಾಖಲಿಸಲು ಡಿಸಿ ಆದೇಶ
ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಅಂತಗಘಟ್ಟೆ ಹಾಗೂ ಕಲ್ಕೆರೆ ಕಂದಾಯ ವೃತ್ತಗಳ ವ್ಯಾಪ್ತಿಯಲ್ಲಿ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಅಕ್ರಮ ಎಸಗಿರುವ ಪ್ರಕರಣ ಸಂಬಂಧ ತನಿಖೆಯ ಪ್ರಾಥಮಿಕ ವರದಿ ಆಧರಿಸಿ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಪಾಲಾಕ್ಷಮೂರ್ತಿ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕಡೂರು ತಾಲೂಕಿನ ಅಂತರಗಟ್ಟೆ ಹಾಗೂ ಕಲ್ಕೆರೆ ಕಂದಾಯ ವೃತ್ತ ವ್ಯಾಪ್ತಿಯ ಹಲವು ಗ್ರಾಮಗಳ ನೂರಾರು ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ವಂಚನೆ ಮಾಡಿರುವ ಬಗ್ಗೆ ಸಂತ್ರಸ್ಥ ರೈತರು ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತನಿಖಾಧಿಕಾರಿಗಳ ತಂಡವನ್ನು ನೇಮಿಸಿದ್ದರು. ಈ ತನಿಖಾ ತಂಡ ಶನಿವಾರ ಜಿಲ್ಲಾಡಳಿತಕ್ಕೆ ತನಿಖೆಯ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಪಾಲಾಕ್ಷಮೂರ್ತಿ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪಾಲಾಕ್ಷಮೂರ್ತಿ ಅವರು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ನೈಜ ಖಾತೆದಾರರ ಪಹಣಿ ಉಪಯೋಗಿಸಿ ಉದ್ದೇಶಪೂರ್ವಕವಾಗಿ 651 ಪ್ರಕರಣಗಳಲ್ಲಿ ಅನ್ಯವ್ಯಕ್ತಿಗಳಿಗೆ, ಮರಣ ಹೊಂದಿದವರ ಖಾತೆಗಳಿಗೂ ಬೆಳೆ ನಷ್ಟ ಪರಿಹಾರ ಹಣ ವರ್ಗಾವಣೆ ಮಾಡಿದ್ದಾರೆ. ಅಕ್ರಮವಾಗಿ ಸುಮಾರು 2.1 ಕೋಟಿ ಹಣವನ್ನು ಅನರ್ಹರ ಖಾತೆಗೆ ಜಮೆ ಮಾಡಿದ್ದಾರೆಂದು ಆದೇಶದಲ್ಲಿ ತಿಳಿಸಿದ್ದು, ಅಧಿಕಾರಿ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಬೇಕೆಂದು ತರೀಕೆರೆ ಕಂದಾಯ ಉಪವಿಭಾಗಾಧಿಕಾರಿಗೆ ಆದೇಶಿಸಿದ್ದಾರೆ.