ಚಿಕ್ಕಮಗಳೂರು | ಕಾಡಾನೆಗಳ ಹಾವಳಿ : ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಸಕಲೇಶಪುರ ಮಾರ್ಗವಾಗಿ ತಾಲೂಕಿಗೆ ಆಗಮಿಸಿರುವ ಬೀಟಮ್ಮ ಗ್ಯಾಂಗ್ನ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಮುಂದುವರಿಸಿದೆ.
ನ.10ರ ಸಂಜೆ 7ಗಂಟೆಯಿಂದ ನ.11ರ ರಾತ್ರಿ 9ರವರೆಗೆ ಕಾಡಾನೆ ಬೀಡುಬಿಟ್ಟಿರುವ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಭಾಗದ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದ್ದು, ಕಾಡಾನೆ ಸಂಚಾರ ಹೆಚ್ಚಾಗಿರುವ ವಸ್ತಾರೆ, ಮೂಗ್ತಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮತ್ತಾವರ, ದಂಬದಹಳ್ಳಿ, ಶಿರಗುಂದ, ದುಂಗೆರೆ, ಮೂಗ್ತಿಹಳ್ಳಿ, ಕದ್ರಿಮಿದ್ರಿ ಹಾಗೂ ವಸ್ತಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲದಗುಡ್ಡೆ, ವಸ್ತಾರೆ, ನಂದಿಕೆರೆ, ದಹುಲುವಾಲೆ, ತೊಂಡವಳಿ, ಸಂಸೆ, ದಿಣ್ಣೆಕರೆ, ಗ್ರಾಮಗಳಲಿ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿಯುವ ಕಾಡಾನೆಗಳ ಗುಂಪು ಇಲ್ಲಿನ ಸುತ್ತಮುತ್ತಲಿನ ಕಾಫಿತೋಟ, ಮೆಣಸು, ಬಾಳೆ ಬೆಳೆಯನ್ನು ನಾಶಮಾಡುತ್ತಿವೆ. ಕೆಂಚೇನಹಳ್ಳಿ ಗ್ರಾಮದ ಕಾಫಿತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ನ.10ರಂದು ಸಂಜೆ 7 ರಿಂದ ನ.11 ರ ರಾತ್ರಿ 9ರವರೆಗೆ ಕಾಡಾನೆ ಇರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕಾಡಾನೆಗಳಿಂದ ತೊಂದರೆ ಉಂಟಾಗದಂತೆ ಸೂಕ್ತ ಭದ್ರತೆ ಒದಗಿಸಬೇಕಿದೆ ಎಂದು ಆಲ್ದೂರು ವಲಯ ಅರಣ್ಯಾಧಿಕಾರಿ ಅವರು ಜಿಲ್ಲಾಡಳಿತವನ್ನು ಕೋರಿದ್ದ ಹಿನ್ನೆಲೆಯಲ್ಲಿ ನ.10 ಮತ್ತು ನ.11ರ ರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಗ್ರಾಮಗಳಲ್ಲಿನ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶ ತಿಳಿಸಿದ್ದು, ಸೋಮವಾರ ಈ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಕಾಲೇಜು ಸಿಬ್ಬಂದಿ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಭಾಗದ ಕಾಫಿ ತೋಟಗಳಲ್ಲಿ ಸಂಚಾರ ಮಾಡುತ್ತಿರುವ ಕಾಡಾನೆಗಳು ಜನರ ನಿದ್ದೆಗೆಡಿಸಿವೆ.
ಬೀಟಮ್ ಗ್ಯಾಂಗ್ನ ಕಾಡಾನೆಗಳು ಕಂಚೇನಹಳ್ಳಿ ಗುಡ್ಡದಲ್ಲಿ ಬೀಡುಬಿಟ್ಟಿದ್ದು, ಆನೆ ಕಾರ್ಯಪಡೆ ತಂಡದ ಸಿಬ್ಬಂದಿ ಆನೆಗಳ ಚಲನವಲನವನ್ನು ಗಮನಿಸುತ್ತಿದ್ದಾರೆ. ಓರ್ವ ಫಾರೆಸ್ಟರ್ ಸೇರಿದಂತೆ ಆನೆ ಕಾರ್ಯಪಡೆಯ 10ಮಂದಿ ಆನೆಗಳ ಸುರಕ್ಷತೆಯ ಬಗ್ಗೆ ಕಾವಲು ಕಾಯುತ್ತಿದ್ದು, ಊರಿನೊಳಗೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಗುಂಪಿನಲ್ಲಿ 2ಮರಿ ಆನೆಗಳಿದ್ದು, ಅವುಗಳು ಅತ್ತಿತ್ತ ಹೋಗದಂತೆ ಹೆಣ್ಣಾನೆ ಕಾವಲು ಕಾಯುತ್ತಿದೆ. ಇವುಗಳ ರಕ್ಷಣೆಗೆಂದು ವಿಕ್ರಾಂತ ಹೆಸರಿನ ಸಲಗ ನಿಂತಿದೆ. ಕೆಲವು ತಿಂಗಳ ಹಿಂದೆ ಇದೇ ಬೀಟಮ್ಮ ಗ್ಯಾಂಗ್ನ ಕಾಡಾನೆಗಳು ನಗರ ಸಮೀಪದ ಕದ್ರಿಮಿದ್ರಿಯ ಮೂಲಕ ಕೆ.ಆರ್.ಪೇಟೆ ತಲುಪಿ, ಬೇಲೂರು ಮಾರ್ಗದ ಮೂಲಕ ಸಕಲೇಶಪುರಕ್ಕೆ ಹೋಗಿದ್ದವು. ಅದೇ ದಾರಿಯಲ್ಲಿ ಕಾಡಾನೆಗಳು ತೆರಳುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕು ಆನೆ ಕಾರ್ಯಪಡೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆಲ್ದೂರುನಲ್ಲಿ ಓರ್ವ ಫಾರೆಸ್ಟರ್ ಸೇರಿದಂತೆ 9 ಮಂದಿ ಕಾರ್ಯಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಚಿಕ್ಕಮಗಳೂರಿನಲ್ಲಿ 10ಮಂದಿ, ನರಸಿಂಹರಾಜಪುರ ಮತ್ತು ಮೂಡಿಗೆರೆಯಲ್ಲಿ ತಲಾ 10 ಮಂದಿ ಆನೆ ಕಾರ್ಯಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.