ಚಿಕ್ಕಮಗಳೂರು | ಮಂಗನ ಕಾಯಿಲೆಗೆ ವೃದ್ದೆ ಬಲಿ : 4ಕ್ಕೇರಿದ ಸೋಂಕಿತರ ಸಾವಿನ ಸಂಖ್ಯೆ
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಮಂಗನಕಾಯಿಲೆಗೆ ಮತ್ತೊಂದು ಬಲಿಯಾಗಿದೆ. ಕೆಲ ದಿನಗಳ ಹಿಂದೆ ಮಂಗನಕಾಯಿಲೆಗೆ ತುತ್ತಾಗಿದ್ದ ವೃದ್ದೆಯೊಬ್ಬರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಮಂಗನಕಾಯಿಲೆಯಿಂದಾಗಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.
ಮೃತರನ್ನು ಕೊಪ್ಪ ತಾಲೂಕಿನ ಬಿಂತ್ರವಳ್ಳಿ ಗ್ರಾಮದ ರತ್ನಾ(68) ಎಂದು ಗುರುತಿಸಲಾಗಿದೆ. ರತ್ನಾ ಅವರಿಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಅವರಲ್ಲಿ ಮಂಗನಕಾಯಿಲೆ ಇರುವ ಲಕ್ಷಣ ಕಂಡು ಬಂದಿತ್ತು. ಕೂಡಲೇ ವೈದ್ಯರು ರತ್ನಾ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷಾ ವರದಿಯಲ್ಲಿ ರತ್ನಾ ಅವರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದ್ದರಿಂದ ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ವೃದ್ಧೆ ರತ್ನಾ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಎಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಎಫ್‍ಡಿ ಸೋಂಕಿತ 11 ಮಂದಿ ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದಾರೆ. ಸೋಂಕು ಹೆಚ್ಚು ಕಂಡು ಬಂದಿರುವ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಕಾಡಿಗೆ ಹೋಗುವ ಸಂದರ್ಭದಲ್ಲಿ ಡಿಎಂಪಿ ತೈಲ ಮೈಗೆ ಹಚ್ಚಿಕೊಂಡು ತೆರಳುವಂತೆ ಸೂಚಿಸುತ್ತಿದ್ದಾರೆ. ಈ ಭಾಗದ ಎಸ್ಟೇಟ್ ಕಾರ್ಮಿಕರಿಗೆ ಡಿಎಂಪಿ ತೈಲವನ್ನೂ ಪೂರೈಕೆ ಮಾಡಲಾಗಿದೆ, ಅರಣ್ಯ ಇಲಾಖೆ ಸಿಬ್ಬಂದಿಗೂ ಡಿಎಂಪಿ ತೈಲ ಪೂರೈಕೆ ಮಾಡಲಾಗಿದೆ.
ಮಲೆನಾಡು ಭಾಗದಲ್ಲಿ ಮಂಗಗಳು ಸತ್ತಿರುವುದು ಕಂಡು ಬಂದಲ್ಲಿ ಆರೋಗ್ಯ ಇಲಾಖೆ ಅಥವಾ ಪಶು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆಯೂ ಅಧಿಕಾರಿಗಳು ಗ್ರಾಮಸ್ಥರಿಗೆ ಸೂಚಿಸಿದ್ದು, ಸತ್ತ ಮಂಗಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೆಎಫ್‍ಡಿ ಸೋಂಕು ಇರುವುದನ್ನು ಪತ್ತೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.