ಚಿಕ್ಕಮಗಳೂರು | ಸಿ.ಟಿ.ರವಿ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಚಿಕ್ಕಮಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವಹೇಳನಾಕಾರಿ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಮೇರೆಗೆ ಸಿ.ಟಿ.ರವಿಯವರನ್ನು ಬಂಧಿಸಿದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಂಗಡಿ ಮುಂಗಟ್ಟುಗಳು, ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ.
ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಸಿ.ಟಿ.ರವಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತಿಗೆ ಹಾಕಲು ಯತ್ನಿಸಿದ್ದು, ಇದಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಕಾಂಗ್ರೆಸ್, ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿ ರಾತ್ರಿ ಬಿಡುಗಡೆ ಮಾಡಿದ್ದರು.
ಆದರೆ ಸಿಟಿ ರವಿ ಬಂಧನದ ಸುದ್ದಿಯಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರಿಂದಾಗಿ ನಗರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಟಯರ್‌ಗಳಿಗೆ ಬೆಂಕಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ದಿಢೀರ್ ಪ್ರತಿಭಟನೆ ಮೆರವಣಿಗೆ ನಡೆಸಿ ಹನುಮಂತಪ್ಪ ವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಟೈರ್‌ಗೆ ಹಚ್ಚಿದ್ದ ಬೆಂಕಿಯನ್ನು ನಂದಿಸಿದರು, ಬಿಜೆಪಿಯ ಕೆಲ ಮುಖಂಡರು ಮತ್ತು ಕಾರ್ಯಕರ್ತರು ಬೆಂಕಿ ಹತ್ತಿದ್ದ ಟೈರ್ ಗಳನ್ನು ಎಲ್ಲೆಂದರಲ್ಲಿ ಎಸೆಯಲು ಮುಂದಾದರು. ಇದರಿಂದ ಪರಿಸ್ಥಿತಿ ಕೈತಪ್ಪುತ್ತಿದ್ದಂತೆ ಜಲಪಿರಂಗಿ ಬಳಸಿ ಟೈರ್‌ಗೆ ಹತ್ತಿದ ಬೆಂಕಿಯನ್ನು ಪೊಲೀಸರು ನಂದಿಸಿದರು. ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗುತ್ತಿದ್ದಂತೆ ಸ್ಥಳದಲ್ಲಿದ್ದ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಕೆಎಸ್‍ಆರ್‌ಟಿಸಿ ಬಸ್‍ನಲ್ಲಿ ಠಾಣೆಗೆ ಕರೆದೊಯ್ದರು.
ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಇದ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸರು ಬಾರ್‌ಗಳು, ಮದ್ಯದಂಗಡಿಗಳನ್ನು ಮುಚ್ಚಿಸಿದ್ದು, ಶುಕ್ರವಾರ ಚಿಕ್ಕಮಗಳೂರು ಬಂದ್‍ಗೆ ಬಿಜೆಪಿ ಮುಖಂಡರು ಸಿದ್ಧತೆ ನಡೆಸಿದ್ದಾರೆ.