ಚಿಕ್ಕಮಗಳೂರಿನಲ್ಲಿ ಕ್ಷೀಣಿಸಿದ ಮಳೆ; ಹೆಚ್ಚಿದ ಬಿರುಗಾಳಿ ಆರ್ಭಟ
ತುಂಬಿ ಹರಿಯುತ್ತಿರುವ ನದಿಗಳು; ತೋಟ, ಹೊಲಗಳು ಜಲಾವೃತ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ, ಆದರೆ ಬಿರುಗಾಳಿಯ ಆರ್ಭಟ ಮತ್ತಷ್ಟು ಬಿರುಸುಗೊಂಡಿದ್ದು, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗುವಂತಹ ಘಟನೆಗಳು ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆ ಪರಿಣಾಮ ಮಲೆನಾಡಿನ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿದ್ದು, ಅಲ್ಲಲ್ಲಿ ನದಿಗಳ ನೆರೆ ನೀರು ನದಿ ಪಾತ್ರದ ಹೊಲ ಗದ್ದೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮಲೆನಾಡು ಭಾಗದಲ್ಲಿ ನಿರಂತರವಾಗಿ ವಿದ್ಯುತ್ ಕಡಿತಗೊಂಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಅಲ್ಲಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದೆ. ಗಾಳಿಯ ತೀವ್ರತೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಶುಕ್ರವಾರ ರಾತ್ರಿ ಚಾರ್ಮಾಡಿ ಘಾಟಿ ರಸ್ತೆಯ 10ನೇ ತಿರುವಿನಲ್ಲಿ ಮರಬಿದ್ದು ಅಲ್ಪಪ್ರಮಾಣದಲ್ಲಿ ಧರೆಕುಸಿದಿದೆ. ಪರಿಣಾಮ ರಾತ್ರಿ ಸುಮಾರು 3ಗಂಟೆಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಕೊಟ್ಟಿಗೆಹಾರ ಚೆಕ್‍ಪೋಸ್ಟ್‍ನಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಮರ ಮತ್ತು ಮಣ್ಣು ತೆರವುಗೊಳಿಸಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು. ಮಳೆ ಮುಂದುವರಿದರೆ ಚಾರ್ಮಾಡಿಘಾಟಿ ರಸ್ತೆಯಲ್ಲಿ ಧರೆಕುಸಿಯುವ ಆತಂಕ ಎದುರಾಗಿದೆ.
ಮಲೆನಾಡಿನಲ್ಲಿ ಮರ ಬಿದ್ದು ಅನೇಕ ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ರಸ್ತೆಗಳಿಗೂ ಹಾನಿಯಾಗಿದ್ದು, ಕೊಪ್ಪ-ನಾರ್ವೆ-ಜಯಪುರ ರಸ್ತೆಯಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರ ಕಡಿತಗೊಂಡಿದೆ. ಪರ್ಯಾಯ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭದ್ರಾ ನದಿಯಲ್ಲಿ ನಾಲ್ಕು ಬಾರಿ ಮುಳಿಗಿದ್ದ ಹೆಬ್ಬಾಳೆ ಸೇತುವೆ ಶನಿವಾರ ಮಳೆ ಕಡಿಮೆಯಾದ ಪರಿಣಾಮ ಹೆಬ್ಬಾಳೆ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆ ಪರಿಣಾಮ ಜಿಲ್ಲೆಯ ಐತಿಹಾಸಿಕ ಕೆರೆಗಳಾದ ಮದಗದ ಕೆರೆ ಮತ್ತು ಅಯ್ಯನ ಕೆರೆಗಳು ತುಂಬಿದ್ದು, ಕೋಡಿ ಬಿದ್ದಿವೆ. ಕೋಡಿ ಬಿದ್ದ ಕೆರೆ ನೀರು ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಈ ಪ್ರದೇಶದಲ್ಲಿನ ಜಮೀನುಗಳಿಗೆ ನೀರು ನುಗ್ಗಿ ಅಡಿಕೆ ತೋಟ, ರೈತರ ಜಮೀನುಗಳು ಜಲಾವೃತಗೊಂಡಿದೆ. ನದಿಪಾತ್ರದಲ್ಲಿ ಮತ್ತು ಕೆರೆ ಕೋಡಿ ಬಿದ್ದ ನಾಲಾ ಪ್ರದೇಶದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ತರೆಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ತರೀಕೆರೆ ತಾಲೂಕಿನಲ್ಲಿನ ಕಲ್ಲತ್ತಗಿರಿ ಜಲಪಾತ ಉಕ್ಕಿ ಹರಿಯುತ್ತಿದೆ. ಜಲಪಾತದ ನೀರಿನಿಂದ ತರೀಕೆರೆ ಪಟ್ಟಣದ ಕೆರೆಗಳು ತುಂಬಿ ಹರಿಯುತ್ತಿವೆ. ಜಂಬದಳ್ಳ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆರೆಪಾತ್ರದ ಅಡಿಕೆ ತೋಟ ಮತ್ತು ಜಮೀನುಗಳಿಗೆ ನೀರು ನುಗ್ಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣ ಮಳೆಯಾದ ಪರಿಣಾಮ ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹೇಮಾವತಿ ನದಿಯ ನೆರೆ ನೀರು ಅಕ್ಕಪಕ್ಕದ ಅಡಿಕೆ, ಕಾಫಿ ತೋಟ, ಶುಂಠಿ ಗದ್ದೆಗಳಿಗೆ ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ. ಭದ್ರಾನದಿ ಉಕ್ಕಿ ಹರಿದಿದ್ದು ಬಾಳೆಹೊನ್ನೂರು, ಕೊಟ್ಟಿಗೆಹಾರ, ಕಳಸ ಸಂಪರ್ಕಿಸುವ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ನಿರಂತರ ಮಳೆಯಿಂದ ಮಲೆನಾಡಿನ ಜನರು ರೋಸಿ ಹೋಗಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನು ಭಾರೀ ಗಾಳಿ ಪರಿಣಾಮ ಮಲೆನಾಡಿನಾದ್ಯಂತ ಮರಗಳು ಧರೆಗುರುಳುತ್ತಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಸಂಪರ್ಕದ ರಸ್ತೆಯಲ್ಲಿ ಶನಿವಾರ ಭಾರೀ ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು 2 ಗಂಟೆಗಳ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ವಿದ್ಯುತ ಸಂಪರ್ಕ ಕಡಿತಗೊಂಡು ಗ್ರಾಮೀಣ ಪ್ರದೇಶದ ಜನರು ಕತ್ತಲೆಯಲ್ಲಿ ದಿನದೂಡುವಂತಾಗಿದೆ.
ಮಳೆ, ಗಾಳಿಯ ಆರ್ಭಟಕ್ಕೆ ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಅಲ್ಲೆಂದರಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಸರಿಪಡಿಸುವುದು ಮೆಸ್ಕಾಂ ಇಲಾಖೆಗೆ ಸವಾಲಾಗಿ ಪರಿಣಾಮಿಸಿದೆ. ಮೆಸ್ಕಾಂ ಸಿಬ್ಬಂದಿ ಪ್ರಾಣವನ್ನು ಪಣಕ್ಕಿಟ್ಟು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯುತ್ ಮಾರ್ಗ ಸರಿಪಡಿಸಿದರೂ ಭಾರೀ ಗಾಳಿಯಿಂದಾಗಿ ಮರಗಳು ಉರುಳಿ ಮತ್ತೆ ಮತ್ತೆ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗುತ್ತಿದೆ. ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಗಡಿಗೇಶ್ವರ ಬಳಿ ಹೊಳೆಯಲ್ಲಿ ಮುಳುಗಿದ್ದ ವಿದ್ಯುತ್ ತಂತಿಗಳನ್ನು ಪ್ರಾಣದ ಹಂಗು ತೊರೆದು ಜೆ.ಇ.ಗಣೇಶ್, ಕಾಂತರಾಜು, ಶಿವಕುಮಾರ್ ತೆಪ್ಪದಲ್ಲಿ ತೆರಳಿ ದುರಸ್ತಿ ಮಾಡಿದ್ದು, ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.