ಚಿಕ್ಕಮಗಳೂರು | ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗಲಾಟೆ ; ಯುವಕನಿಗೆ ಬ್ಲೇಡ್‌ನಿಂದ ಹಲ್ಲೆ: ಆರೋಪಿ ಬಂಧನ
ಚಿಕ್ಕಮಗಳೂರು : ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಒಂದು ಗುಂಪಿನ ಯುವಕ ಮತ್ತೊಂದು ಗುಂಪಿನ ಯುವಕನ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬುಧವಾರ ರಾತ್ರಿ ನಗರ ಸಮೀಪದ ಗವನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಗವನಹಳ್ಳಿ ಗ್ರಾಮದ ನಿವಾಸಿ ಗೌತಮ್(23) ಹಲ್ಲೆಗೊಳಗಾದ ಯುವಕನಾಗಿದ್ದು, ಇದೇ ಗ್ರಾಮದ ತಿಮ್ಮರಾಜ್ ಅರಸ್ ಬ್ಲೇಡ್‌ನಿಂದ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ. ಬುಧವಾರ ರಾತ್ರಿ ಗವನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಸರ್ಜನಾ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ತಿಮ್ಮರಾಜ್ ಅರಸ್ ಹಾಗೂ ಗೌತಮ್ ಎಂಬವರ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದಾಗ ತಿಮ್ಮರಾಜ್ ಅರಸ್ ತನ್ನ ಬಳಿ ಮೊದಲೇ ಇಟ್ಟುಕೊಂಡಿದ್ದ ಬ್ಲೇಡ್‌ನಿಂದ ಗೌತಮ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗೌತಮ್‌ನ ಮುಖ, ಕುತ್ತಿಗೆ, ಕಿವಿ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಆರೋಪಿ ತಿಮ್ಮರಾಜ್ ಅರಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.