ನನ್ನ ಕೊಲೆಗೆ ಯತ್ನಿಸಿದವರ ಮೇಲೆ ಕ್ರಮ ಆಗದಿದ್ದರೆ ಬೆಳಗಾವಿ ಚಲೋ ಚಳವಳಿ : ಸಿ.ಟಿ.ರವಿ
"ನಾನು ಕೊಟ್ಟ ದೂರಿನ ಮೇಲೆ ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ"
ಸಿ.ಟಿ.ರವಿ
ಚಿಕ್ಕಮಗಳೂರು: ಹಮ್ಮುರಾಬಿ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ, ಹತ್ಯೆ ಮಾಡುವಂತಹ ಕೆಲಸ ಮಾಡುತ್ತಾರೆ. ಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರಿಗೆ ನಂಬಿಕೆ ಇರುವುದು ಹಮ್ಮುರಾಬಿ ಸಿದ್ಧಾಂತದ ಮೇಲೆ ಮಾತ್ರ. ನನ್ನ ಹತ್ಯೆಗೆ ಯತ್ನಿಸಿದವರ ಮೇಲೆ ಕಾನೂನು ಕ್ರಮ ಆಗಬೇಕು, ತಪ್ಪಿದಲ್ಲಿ ಬೆಳಗಾವಿ ಚಲೋ ಚಳವಳಿಗೆ ನಿರ್ಧರಿಸಲಾಗಿದೆ ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ದೂರಿನ ಮೇರೆಗೆ ತನ್ನ ಮೇಲೆ ದಿಢೀರ್ ಕ್ರಮ ಕೈಗೊಳ್ಳುವ ಪೊಲೀಸರು, ನಾನು ಕೊಟ್ಟ ದೂರಿನ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದಕ್ಕೆ ಸಿಎಂ ಏನು ಹೇಳುತ್ತಾರೆ?, ಕಾನೂನಿನಡಿಯಲ್ಲಿ ನ್ಯಾಯ ಕೇಳುವ ಅಧಿಕಾರ ನನಗಿಲ್ಲವಾ?, ಇವರ ದೃಷ್ಟಿಯಲ್ಲಿ ಗೂಂಡಾಗಳನ್ನು ಕಳುಹಿಸಿ ನ್ಯಾಯ ಪಡೆಯಬೇಕಾ? ಎಂದು ಪ್ರಶ್ನಿಸಿದರು.
ನಾನು ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೇನೆ. ಇದರ ಉದ್ದೇಶ ಘಟನೆಯ ಬಗ್ಗೆ ಸತ್ಯಾಸತ್ಯತೆ ಹೊರ ಬರಲಿ ಎನ್ನುವುದೇ ಆಗಿದೆ. ನನ್ನನ್ನು ಬಂಧಿಸಿ ನಿಗೂಢ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಹೀಗೆ ಕರೆದುಕೊಂಡು ಹೋದವರು ಅಪರಿಚಿತರಲ್ಲ, ಕರ್ನಾಟಕ ರಾಜ್ಯ ಪೊಲೀಸರು, ಪೊಲೀಸರಿಗೆ ಆಗಾಗ್ಗೆ ನಿಗೂಢ ಸ್ಥಳದಿಂದ ನಿರ್ದೇಶನ ಬರುತ್ತಿತ್ತು. ಅದಕ್ಕೆ ನಾನು ಪೊಲೀಸರ ಕಾಲ್ ರೆಕಾರ್ಡ್ ಮಾಡಬೇಕು ಎಂದು ಹೇಳಿದ್ದೇನೆ ಎಂದರು.
ಈ ಘಟನೆ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ, ಹಕ್ಕು ಚ್ಯುತಿ ಮಂಡಿಸುತ್ತೇವೆ, ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ. ನನ್ನ ಮೇಲೆ ಕೊಲೆ ಯತ್ನ ನಡೆದಿದ್ದು, ಯಾರೆಲ್ಲ ಕೊಲೆಗೆ ಯತ್ನ ಮಾಡಿದ್ದಾರೆ ಎನ್ನುವ ಬಗ್ಗೆಯೂ ದೂರು ಕೊಡುತ್ತೇವೆ. ನಾನು ನೀಡಿದ ದೂರಿಗೆ ಇನ್ನೂ ಎಫ್ಐಆರ್ ಆಗಿಲ್ಲ, ನನ್ನ ಕೊಲೆಗೆ ಯತ್ನಿಸಿದ, ಕುಮ್ಮಕ್ಕು ನೀಡಿದವರ ಮೇಲೂ ಕ್ರಮ ಆಗಬೇಕು. ಇಲ್ಲದಿದ್ದಲ್ಲಿ ಬೆಳಗಾವಿ ಚಲೋ ಚಳವಳಿ ಮಾಡುತ್ತೇವೆ. ಇದಕ್ಕೆ ಪಕ್ಷದ ಅಧ್ಯಕ್ಷ, ವಿಪಕ್ಷ ನಾಯಕರು ಬೆಂಬಲ ನೀಡಿದ್ದಾರೆ ಎಂದರು.