ಮುಖ್ಯಮಂತ್ರಿ ಹುದ್ದೆಗಾಗಿ ಡಿ.ಕೆ.ಶಿವಕುಮಾರ್ ಡ್ರಾಮಾ ಮಾಡುತ್ತಿದ್ದಾರೆ : ಸಿ.ಟಿ.ರವಿ ತಿರುಗೇಟು
ಸಿ.ಟಿ.ರವಿ
ಚಿಕ್ಕಮಗಳೂರು : "ಯಾರು ಮೋಹ, ಮಧ, ಮತ್ಸರಗಳಿಂದ ಹೊರಗಿದ್ದು ಸಮಾಜವನ್ನು ನೋಡುತ್ತಾರೋ ಅವರಿಗೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮೋಹದ ಪರವಶರಾದವರಿಗೆ, ಅಧಿಕಾರದ ಮಧದಿಂದ ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥವಾಗುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿರುಗೇಟು ನೀಡಿದರು.
ಸಿ.ಟಿ.ರವಿ ಡ್ರಾಮಾ ಮಾಸ್ಟರ್ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ರವಿವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ʼಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ನ್ಯಾಯದ ಸ್ಥಾನದಲ್ಲಿದ್ದಾರೆ, ಆದರೆ, ಯಾರದ್ದೋ ಪರ ವಕೀಲರಾಗಿ ಬಿಟ್ಟಿದ್ದಾರೆʼ ಎಂದು ಕುಟುಕಿದರು.
ಸಭಾಪತಿಗಳು ರೂಲಿಂಗ್ ನೀಡಿದ ಮೇಲೂ ನಡೆದ ಘಟನೆ ಬಗ್ಗೆ ಗಾಂಧಿಗಿರಿ ಎನ್ನಬೇಕೇ ಅಥವಾ ಗೂಂಡಾಗಿರಿ ಎನ್ನಬೇಕೇ., ಪೊಲೀಸರು ಮಾಡಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ, ಯಾರ ಕಾಣದ ಕೈಗಳ ಪಾತ್ರವಿದೆ. ಇದನ್ನು ಮೋಹ, ಮಧ ಮತ್ಸರಗಳಿಂದ ಹೊರಗಿದ್ದು ನೋಡಿದರೇ ಸತ್ಯದ ಅರಿವು ಆಗುತ್ತದೆ. ಯಾರು ಹೇಗಿದ್ದಾರೋ ಇತರರೂ ಹಾಗೇ ಎಂದು ಡಿ.ಕೆ.ಶಿವಕುಮಾರ್ ಭಾವಿಸುತ್ತಾರೆ. ಡಿ.ಕೆ.ಶಿವಕುಮಾರ್ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಹುದ್ದೆಗಾಗಿ ಎಂದು ಕೆಲ ಕಾಂಗ್ರೆಸ್ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿ, ʼಪತ್ರ ಬಂದಿದೆ. ತನಿಖೆ ನಡೆಯುತ್ತಿದೆ. ಕಚೇರಿಯಿಂದಲೇ ದೂರು ಕೊಟ್ಟಿದ್ದಾರೆ. ಹೋರಾಟದಿಂದ ಬಂದವನು ನಾನು, ಇಂತಹದಕ್ಕೆಲ್ಲ ಹೆದರುವುದಿಲ್ಲ. ನನ್ನ ಡಿಕ್ಷನರಿಯಲ್ಲಿ ಹೆದರಿಕೆಗೆ ಜಾಗವಿಲ್ಲʼ ಎಂದು ತಿರುಗೇಟು ನೀಡಿದರು.