ದತ್ತಜಯಂತಿ: ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯ, ಮುಜಾವರ್ ಗಳಿಗೆ ಗನ್‍ಮ್ಯಾನ್ ಭದ್ರತೆ
ಚಿಕ್ಕಮಗಳೂರು: ಜಿಲ್ಲಾಡಳಿತದಿಂದ ಡಿ.22ರಿಂದ 26ರವರೆಗೆ ದತ್ತಜಯಂತಿ ಕಾರ್ಯಕ್ರಮ ನಡೆಯಲಿದ್ದು, ದತ್ತಜಯಂತಿ ಸಂದರ್ಭ ಧಾರ್ಮಿಕ ಆಚರಣೆಗಳ ಮೇಲ್ವಿಚಾರಣೆ ನಡೆಸುವ ವ್ಯವಸ್ಥಾಪನಾ ಸಮಿತಿಯ ಕೆಲ ಸದಸ್ಯರು ಹಾಗೂ ಅರ್ಚಕರು, ಮುಜಾವರ್ ಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಪೂಜಾ ಕಾರ್ಯ ನೆರವೇರಿಸಲು ನೇಮಕಗೊಂಡಿದ್ದ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಗನ್ ಮ್ಯಾನ್‍ಗಳನ್ನು ನೇಮಿಸಿದ್ದು, ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಎಸ್.ಎಂ.ಬಾಷಾ, ಅರ್ಚಕರಾದ ಶ್ರೀಧರ್ ಪೂಜಾರಿ, ಶಿವರಾಂ ಭಟ್ ಹಾಗೂ ಮುಜಾವರ್ ಗಳಾದ ಸೈಯದ್ ಪಾಷಾ ಹಾಗೂ ಇಸ್ಮಾಯಿಲ್ ಸೇರಿದಂತೆ ಒಟ್ಟು ಐವರಿಗೆ ಗನ್ ಮ್ಯಾನ್‍ಗಳನ್ನು ರಕ್ಷಣೆಗಾಗಿ ನೇಮಿಸಲಾಗಿದೆ.
ದತ್ತಜಯಂತಿ ಹಿನ್ನೆಲೆಯಲ್ಲಿ ಈ ಐದೂ ಜನರಿಗೆ ಗನ್ ಮ್ಯಾನ್ ನೀಡಲಾಗಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಾಣ ಭೀತಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಐದೂ ಜನರಿಗೆ ದಿನದ 16 ಗಂಟೆಗಳ ಕಾಲ ಗನ್ ಮ್ಯಾನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ದತ್ತಪೀಠದಲ್ಲಿ ನಿತ್ಯ ಪೂಜೆ ಸಲ್ಲಿಸುವ ಶ್ರೀಧರ್ ಪೂಜಾರಿ ಅವರಿಗೆ ಮುಖ್ಯಪೇದೆ ದುಗ್ಗಪ್ಪ, ಶಿವರಾಮ್ ಭಟ್ಟರಿಗೆ ನಂಜುಂಡ ಸ್ವಾಮಿ, ಮುಜಾವರ್ ಸೈಯದ್ ಪಾಷಾರಿಗೆ ಸಂದೀಪ್ , ಇಸ್ಮಾಯಿಲ್ ಅವರಿಗೆ ಪ್ರಭು ಹಾಗೂ ಐ.ಡಿ ಪೀಠ ವ್ಯವಸ್ಥಾಪನ ಸಮಿತಿ ಸದಸ್ಯ ಎಸ್.ಎಂ.ಬಾಷಾರಿಗೆ ಎಎಸ್ಸೈ ಗಿರಿಧರ್ ಅವರನ್ನು ಗನ್ ಮ್ಯಾನ್ ಆಗಿ ನೇಮಿಸಲಾಗಿದೆ. ದತ್ತಜಯಂತಿ ಮುಗಿಯುವವರೆಗೂ ಶಸ್ತ್ರಸಜ್ಜಿತ ಪೊಲೀಸರು ಈ ಐವರ ರಕ್ಷಣೆಯ ಕರ್ತವ್ಯ ನಿರ್ವಹಿಸಲಿದ್ದಾರೆ.