ದತ್ತಾತ್ರೇಯ ಬಾಬಾ ಬುಡಾನ್ ದರ್ಗಾ ವಿವಾದ | ಶಾಶ್ವತ ಪರಿಹಾರಕ್ಕೆ ಸಚಿವ ಸಂಪುಟ ಉಪಸಮಿತಿಗೆ ಮನವಿ: ಮುಹಮ್ಮದ್ ಶಾಹಿದ್ ರಝ್ವಿ

ಚಿಕ್ಕಮಗಳೂರು : ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜ.17ರಂದು ರಾಜ್ಯ ಸರಕಾರ ನೇಮಿಸಿರುವ ಸಚಿವ ಸಂಪುಟ ಉಪಸಮಿತಿಯು ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎರಡು ಸಮುದಾಯದ ಮುಖಂಡರು, ಪ್ರತಿನಿಧಿಗಳ ವಿಧಾನಸಭೆ ಸಭೆ ನಡೆಸಿದ್ದು, ಈ ಸಭೆಯ ಮುಂದೆ ಎರಡೂ ಸಮುದಾಯದ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಮುಂದಿಟ್ಟು ವಿವಾದಾತ್ಮಕ ಸಂಸ್ಥೆಯಲ್ಲಿ ಸೌಹಾರ್ದತೆ, ಸಾಮಾರಸ್ಯ ಕಾಪಾಡುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿದ್ದಾರೆ ಎಂದು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಶಾಹಿದ್ ರಝ್ವಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರೂ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ, ಸೌಹಾರ್ದ ವಾತಾವರಣವನ್ನು ಬಲಿಷ್ಠಗೊಳಿಸಬೇಕೆಂಬ ಮನವಿಯನ್ನು ಸಮಿತಿ ಮುಂದಿಟ್ಟಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಇದು ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದರು.
ರಾಜ್ಯ ಸರಕಾರದ ಸಚಿವ ಸಂಪುಟದ ಉಪಸಮಿತಿ ನಡೆಸಿರುವ ಸಭೆ ಮಹತ್ವದ ಸಭೆಯಾಗಿದ್ದು, ಈ ಸಭೆಯಲ್ಲಿ ಜಿಲ್ಲೆಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದಿಂದ ವಿವಾದಾಸ್ಪದ ಸಮಸ್ಯೆಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಮಿತಿಗೆ ಸಲ್ಲಿಸಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶ ಸಂಖ್ಯೆ ಎಂ-5, ಡಿವಿಎಸ್ 88-89, 25.02.1989ರ ಹಿಂದಿನ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಮನವಿ ಮಾಡಲಾಗಿದೆ. ಅಲ್ಲದೆ ಧಾರ್ಮಿಕ ಪೂಜಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ರಂತೆ ಕ್ರಮ ಕೈಗೊಳ್ಳುವುದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯನ್ನು ಪರಿಗಣಿಸಿ, ಅಂಗೀಕರಿಸಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಬಾಬಾ ಬುಡಾನ್ ದರ್ಗಾವು ಈ ಹಿಂದೆ ಎರಡೂ ಸಮುದಾಯದವರ ಶ್ರದ್ಧಾಭಕ್ತಿಯ ಕೇಂದ್ರವಾಗಿತ್ತು. ಕಳೆದೆರಡು ದಶಕಗಳಿಂದ ಈ ಕೇಂದ್ರ ವಿವಾದಾತ್ಮಕ ಕೇಂದ್ರವಾಗಿ ದೇಶಾದ್ಯಂತ ಗಮನಸೆಳೆದಿದೆ. ಇದು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದೆ. ಈ ವಿವಾದದಿಂದಾಗಿ ಜಿಲ್ಲೆಯಲ್ಲಿ ಪರಸ್ಪರ ಸಂಬಂಧ, ಶಾಂತಿ ಸಾಮರಸ್ಯಗಳಲ್ಲಿ ಬಿರುಕು ಉಂಟಾಗಿದೆ. ಇದು ಕೊನೆಗಾಣಬೇಕು. ನಾವೆಲ್ಲರೂ ಈ ದೇಶದ ಮಕ್ಕಳಾಗಿದ್ದು, ಇಲ್ಲಿ ಎಲ್ಲರೂ ಬಾಂಧವ್ಯದಿಂದ ಬದುಕಬೇಕಾಗಿದೆ. ಆದ್ದರಿಂದ ಇತಿಹಾಸವನ್ನು ಆಧರಿಸಿ ಶಾಂತಿ, ಸಹಜೀವನಕ್ಕಾಗಿ ವಿವಾದವನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ಈ ವಿವಾದದ ವಿಚಾರವಾಗಿ ಬಾಹ್ಯ ಶಕ್ತಿಗಳಿಂದ ಪ್ರಚೋದನೆಗೆ ಒಳಗಾಗದೆ ಜಿಲ್ಲೆಯ ಶಾಂತಿ ಸೌಹಾರ್ದ, ಸಾಮರಸ್ಯ, ಸಹಬಾಳ್ವೆಯ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸರಕಾರದೊಂದಿಗೆ ಸಹಕರಿಸಬೇಕು. ಭಿನ್ನಾಭಿಪ್ರಾಯ, ವಿವಾದ ಬಗೆಹರಿಸಲು ಎರಡೂ ಸಮುದಾಯದವರು ಪರಸ್ಪರ ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕೆಂದು ಸಲಹೆ ನೀಡಿದ ರಝ್ವಿ, ಸಚಿವ ಸಂಪುಟ ಉಪಸಮಿತಿ ಮುಂದೆ ಎರಡೂ ಸಮುದಾಯದವರ ಮನವಿ ಸಕಾರಾತ್ಮಕವಾಗಿದ್ದು, ಸರಕಾರ ಉತ್ತಮ ನಿರ್ಣಯದೊಂದಿಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯೂಸುಫ್ ಹಾಜಿ, ಫೈರೋಝ್ ಅಹ್ಮದ್ ರಝ್ವಿ, ಸಿರಾಜ್ ಅಹ್ಮದ್, ಜಂಶೀದ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.