ಬಿಜೆಪಿ ಮುಖಂಡನಿಂದ ದೇಗುಲ ನಿರ್ಮಾಣಕ್ಕಾಗಿ ವಾಸದ ಮನೆ ಧ್ವಂಸ: ಸರಸ್ವತಿಪುರ ಸಂತ್ರಸ್ತ ಕುಟುಂಬದ ಆರೋಪ
ನಿರ್ಮಾಣ ಹಂತದ ಮಂಜುನಾಥ್ ಅವರ ಮನೆ
ಚಿಕ್ಕಮಗಳೂರು: ರಾಮನ ದೇಗುಲ ನಿರ್ಮಿಸಬೇಕೆಂದು ಬಿಜೆಪಿ ಮುಖಂಡನೊಬ್ಬ ಗ್ರಾಮಸ್ಥರೊಂದಿಗೆ ಸೇರಿ ಪಿತ್ರಾರ್ಜಿತವಾಗಿ ಬಂದಿದ್ದ ಮನೆಯನ್ನು ರಾತ್ರೋರಾತ್ರಿ ಕೆಡವಿ ಹಾಕಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ರಾಜಕೀಯ ಒತ್ತಡದಿಂದ ತನ್ನ ಕುಟುಂಬಕ್ಕೆ ನ್ಯಾಯ ನೀಡುತ್ತಿಲ್ಲ ಎಂದು ಬೀರೂರು ಪಟ್ಟಣದ ಸರಸ್ವತಿಪುರ ವಾರ್ಡ್ನ ನಿವಾಸಿ ಮಂಜುನಾಥ್ ಆರೋಪಿಸಿದ್ದಾರೆ.
ಬುಧವಾರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಸ್ವತಿಪುರ ಬಡಾವಣೆಯ ವಾರ್ಡ್ ನಂ.5ರಲ್ಲಿ ತನಗೆ ಪಿತ್ರಾರ್ಜಿತವಾಗಿ ಬಂದಿರುವ ಗುಡಿಸಲು ಮನೆ ಇದ್ದು, ಈ ಮನೆಯನ್ನು ಇತ್ತೀಚೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಹೊಸದಾಗಿ ನಿರ್ಮಿಸಲಾಗಿತ್ತು. ಕಳೆದ ದತ್ತಜಯಂತಿ ಸಂದರ್ದಲ್ಲಿ ತಾನು ಕುಟುಂಬ ಸಮೇತವಾಗಿ ಚಿಕ್ಕಮಗಳೂರು ನಗರಕ್ಕೆ ಮದುವೆ ಸಮಾರಂಭಕ್ಕೆ ಬಂದಿದ್ದು, ಈ ಸಂದರ್ಭ ನೋಡಿಕೊಂಡು ಬಡಾವಣೆ ನಿವಾಸಿ ಬಿಜೆಪಿ ಮುಖಂಡ ರುದ್ರಪ್ಪ ಹಾಗೂ ಆತನ ಪತ್ನಿ ಬೀರೂರು ಪುರಸಸಭೆ ಸದಸ್ಯೆಯ ಕುಮ್ಮಕ್ಕಿನಿಂದಾಗಿ ಬಡಾವಣೆಯ ಸುಮಾರು 13 ಮಂದಿ ರಾತ್ರಿ ವೇಳೆ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹಾಕಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರು, ಪುರಸಭೆಗೆ ದೂರು ನೀಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮನೆಯ ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ತನ್ನ ಬಳಿ ಇವೆ. ಕಳೆದ 50 ವರ್ಷಗಳಿಂದ ಈ ಮನೆ ತನ್ನ ಸ್ವಾಧೀನದಲ್ಲಿದ್ದು, ನನ್ನ ಇಡೀ ಕುಟುಂಬ ಈ ಮನೆಯಲ್ಲಿ ವಾಸವಾಗಿದೆ. ಸದ್ಯ ತನ್ನ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿರುವುದಲ್ಲದೇ ಇಡೀ ಮನೆಯನ್ನೇ ನೆಲಸಮ ಮಾಡಿರುವುದರಿಂದ ನನ್ನ ಕುಟುಂಬ ಬೀದಿಪಾಲಾಗಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ತನಗೆ ಹಣ ನೀಡಿ ಬಾಡಿಗೆ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲ. ತನ್ನ ಮನೆಯನ್ನು ಕೆಡವಿರುವವರ ವಿರುದ್ಧ ಕಾನೂನು ಕ್ರಮಕೈಗೊಂಡು ಮನೆಯನ್ನು ಹೊಸದಾಗಿ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತ ಮಂಜುನಾಥ್ ಒತ್ತಾಯಿಸಿದರು.
ಮಂಜುನಾಥ್ ಪತ್ನಿ ಹೇಮಾ ಮಾತನಾಡಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಬಡಾವಣೆಯಲ್ಲಿರುವ ತಮ್ಮದೇ ಸಮುದಾಯದ ನಿವಾಸಿಗಳು ಬಿಜೆಪಿ ಮುಖಂಡ ಹಾಗೂ ಆತನ ಪತ್ನಿಯ ಕುಮ್ಮಕ್ಕಿನಿಂದ ಇಡೀ ಮನೆಯನ್ನು ನೆಲಸಮ ಮಾಡಿದ್ದಾರೆ. ಯಾವುದೇ ಕಟ್ಟಡ ಕೆಡವಲು ಸಂಬಂಧಿಸಿದ ಇಲಾಖಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಆದರೆ ತಮ್ಮ ಮನೆಯನ್ನು ಕೆಡವಲು ಯಾವುದೇ ಅನುಮತಿಯನ್ನೂ ಪಡೆದುಕೊಂಡಿಲ್ಲ. ಅಕ್ರಮವಾಗಿ ತಮ್ಮ ಮನೆಗೆ ಪ್ರವೇಶ ಮಾಡಿ ಮನೆಯನ್ನು ದ್ವಂಸ ಮಾಡಿರುವುದಲ್ಲದೇ ತಮ್ಮ ಮನೆಯ ಜಾಗದಲ್ಲಿ ರಾಮನ ಫೋಟೊ ಇಟ್ಟು ಪೂಜೆ ಮಾಡಿದ್ದಾರೆ. ಮನೆಯ ಜಾಗದಲ್ಲಿ ರಾಮನ ದೇಗುಲ ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಮನೆ ಹಾಗೂ ಜಾಗದ ವಾರಸುದಾರರು ತನ್ನ ಪತಿಯಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ತಮ್ಮ ಬಳಿ ಇವೆ. ಈ ದಾಖಲಾತಿಗಳೊಂದಿಗೆ ಪೊಲೀಸರು ಮತ್ತು ಪುರಸಭೆ ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ತನ್ನ ಕುಟುಂಬಕ್ಕೆ ನ್ಯಾಯ ಸಿಗುತ್ತಿಲ್ಲ. ರಾಜಕೀಯ ಒತ್ತಡದಿಂದ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತಿಲ್ಲ ಎಂದು ಕಂಬನಿ ಮಿಡಿದರು.
ಈ ಘಟನೆ ಸಂಬಂಧ ಸ್ಥಳೀಯ ಶಾಸಕ ಕೆ.ಎಸ್.ಆನಂದ್ ಅವರಿಗೆ ದೂರು ನೀಡಿದ್ದು, ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಶಾಸಕರ ಮಾತಿಗೂ ಬೆಲೆ ನೀಡಿಲ್ಲ. ತನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗುತ್ತಿರುವ, ಮನೆ ಕೆಡವಿ ಲಕ್ಷಾಂತರ ರೂ. ನಷ್ಟ ಮಾಡಿರುವವರ ವಿರುದ್ಧ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು. ತನ್ನ ಕುಟುಂಬಕ್ಕೆ ಪರಿಹಾರ, ರಕ್ಷಣೆ, ನ್ಯಾಯ ನೀಡಬೇಕೆಂದರು.
ಈ ವೇಳೆ ದಸಂಸ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಮಂಜುನಾಥ್ ಅವರ ಜಾಗ, ಮನೆಗೆ ಸಂಬಂಧಿಸಿದಂತೆ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿದ್ದು, ಎಲ್ಲ ದಾಖಲಾತಿಗಳು ಕ್ರಮಬದ್ಧವಾಗಿದ್ದರೂ ಬಡ ಕುಟುಂಬದ ಮೇಲೆ ಪ್ರಭಾವಿಗಳು ರಾಜಕಾರಣಿಗಳ ಬೆಂಬಲದಿಂದ ದೌರ್ಜನ್ಯ ಎಸಗಿದ್ದಾರೆ. ರಾತ್ರೋರಾತ್ರಿ ಮನೆಯನ್ನು ಕೆಡವಿ ಕುಟುಂಬಸ್ಥರನ್ನು ಬೀದಿಪಾಲು ಮಾಡಲಾಗಿದೆ. ಈ ಸಂಬಂಧ ಸಂಬಂಧಿಸಿದ ಇಲಾಖಾಧಿಕಾರಿಗಳು ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಕುಟುಂಬದ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ನೊಂದವರು ದಲಿತ ಸಂಘರ್ಷ ಸಮಿತಿಗೆ ದೂರು ನೀಡಿದ್ದು, ಅಧಿಕಾರಿಗಳು ಸಂತ್ರಸ್ತ ಕುಟುಂಬದವರಿಗೆ ನ್ಯಾಯ ನೀಡದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಮಹೇಂದ್ರ ಸ್ವಾಮಿ, ನಾಗರಾಜ್, ರಾಜು ಮತ್ತಿತರರು ಉಪಸ್ಥಿತರಿದ್ದರು.