ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ
![ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ](https://www.varthabharati.in/h-upload/2025/01/20/1316542-hospitla.webp)
ಚಿಕ್ಕಮಗಳೂರು: ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಮೂವರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ರವಿವಾರ ನಡೆದಿರುವುದಾಗಿ ವರದಿಯಾಗಿದೆ.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ಮುರಳಿ ಹಲ್ಲೆಗೊಳಗಾದವರು.
ಕಳಕೊಡು ನಿವಾಸಿ ಧರಣೇಂದ್ರ ಜೈನ್, ಜೇನುಗೂಡು ಸುರೇಶ್ ಹಾಗೂ ಅವರ ಪುತ್ರ ಸುಹಾನ್ ಎಂಬವರು ತನ್ನ ಮೇಲೆ ವಿನಾ ಕಾರಣ ಹಲ್ಲೆ ನಡೆಸಿರುವುದಾಗಿ ಡಾ.ಮುರಳಿ ಕಳಸ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಜ.19ರಂದು ಬಾಳೆಹೊಳೆ ಗ್ರಾಮದ ಅವಿನಾಶ್ ಎಂಬ ಯುವಕ ಮರದಿಂದ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನದ ವೇಳೆಯಾಗಿದ್ದರಿಂದ ಈ ವೇಳೆ ಡಾ.ಮುರಳಿ ಊಟಕ್ಕೆ ತೆರಳಿದ್ದರು. ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಡಾ.ಮುರಳಿ ಆಸ್ಪತ್ರೆಗೆ ಆಗಮಿಸಿ ಗಾಯಾಳಿಗೆ ಚಿಕಿತ್ಸೆ ನೀಡಿದ್ದಾರೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವಿನಾಶ್ ರನ್ನು ಮಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಈ ವೇಳೆ ಆಸ್ಪತ್ರೆಗೆ ಬಂದ ಧರಣೇಂದ್ರ ಜೈನ್, ಸುರೇಶ, ಸುಹಾನ್ ಎಂಬವರು ಇಲ್ಲ ವೈದ್ಯರು ಯಾರೆಂದು ಕೇಳಿದ್ದಲ್ಲದೆ, ಏಕಾಏಕಿ ತನ್ನ ಮೇಲೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆ ಆರೋಪಿ ಧರಣೇಂದ್ರ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿರುವುದರಿಂದ ಪೊಲೀಸರು ರಾಜಕಾರಣಿಗಳ ಒತ್ತಡದಿಂದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಡಾ.ಮುರಳಿ ದೂರಿದ್ದಾರೆ.